ಬೆಂಗಳೂರು : ಇಂಡಿಯನ್ ಹಾಕಿ ಟೀಂ ಪ್ಲೇಯರ್ ಮೇಲೆ ಫೋಕ್ಸೋ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದೆ. ಮದುವೆಯಾಗೋದಾಗಿ ನಂಬಿಸಿ ಸ್ಟಾರ್ ಆಟಗಾರ್ತಿ ಅಪ್ರಾಪ್ರೆಯಾಗಿದ್ದಾಗ ಅತ್ಯಾಚಾರ ಮಾಡಿರುವ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಪ್ರತಿಷ್ಠಿತ ಕ್ರೀಡೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಯುವತಿಯ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಭಾರತೀಯ ಹಾಕಿ ತಂಡದ ಡಿಫೆಂಡರ್ ವರುಣ್ ಕುಮಾರ್ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾರೆ. ಕ್ರೀಡಾ ತರಬೇತಿ ಪಡೆಯುವಾಗ ಇನ್ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು ಒತ್ತಾಯಪೂರ್ವಕವಾಗಿ ಹಿಂದೆ ಬಿದ್ದು, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಆಮೇಲೆ ದೂರಾಗಿದ್ದಾನೆ ಎಂದು ಆರೋಪಿಸಲಾಗಿದೆ. 2019 ರಿಂದ ಯುವತಿ ಜೊತೆಗೆ ಸಂಪರ್ಕದಲ್ಲಿದ್ದ ವರುಣ್ ಐದು ವರ್ಷಗಳಿಂದ ಹಲವಾರು ಬಾರಿ ಲೈಂಗಿಕ ಸಂಪರ್ಕ ಬೆಳೆಸಿ ಈಗ ಮದುವೆಯಾಗದೇ ವಂಚನೆ ಮಾಡ್ತಿದ್ದಾನೆಂದು ಎಫ್ಐಆರ್ ದಾಖಲಾಗಿದೆ. ಮೂಲತಃ ಹಿಮಾಚಲ ಪ್ರದೇಶದವನಾಗಿರೋ ವರುಣ್ ಕುಮಾರ್ ಹಾಕಿಗಾಗಿಯೇ ಪಂಜಾಬ್ ಗೆ ಶಿಫ್ಟ್ ಆಗಿದ್ದ. 2017ರಲ್ಲಿ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ್ದ ವರುಣ್, 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ, 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ. 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯನೂ ಕೂಡ ಆಗಿದ್ದಾನೆ. ಕಂಚಿನ ಸಾಧನೆ ಬಳಿಕ ವರುಣ್ ಕುಮಾರ್ ಗೆ ಹಿಮಾಚಲ ಪ್ರದೇಶ ಸರ್ಕಾರ 1 ಕೋಟಿ ಬಹುಮಾನ ಸಹ ಘೋಷಿಸಿತ್ತು. 2021 ನೇ ಸಾಲಿನ ಅರ್ಜುನ ಪ್ರಶಸ್ತಿಗೂ ವರುಣ್ ಕುಮಾರ್ ಭಾಜನನಾಗಿದ್ದು, ಇದೀಗ ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ ಅತ್ಯಾಚಾರ ಆರೋಪಿಯಾಗಿದ್ದಾನೆ.