ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಯಲ್ಲಿ ಭಾರೀ ಹಿಂಸಾಚಾರ ನಡೆದಿದೆ. ಉತ್ತರದಿಂದ ದಕ್ಷಿಣ ಬಂಗಾಳದವರೆಗೆ ಒಂಬತ್ತು ಜಿಲ್ಲೆಗಳಲ್ಲಿ ಬೆಂಕಿ, ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಹತ್ಯೆಯಾದವರಲ್ಲಿ 10 ಮಂದಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಮೂವರು ಮತ್ತು ಸಿಪಿಐ(ಎಂ)ನ ಇಬ್ಬರು ಕಾರ್ಯಕರ್ತರು ಹಿಂಸಾಚಾರಕ್ಕೆ ಬಲಿಯಾದರು. ಕೇಂದ್ರ ಮತ್ತು ರಾಜ್ಯದ 1.7 ಲಕ್ಷ ಭದ್ರತಾ ಪಡೆಗಳನ್ನು ನಿಯೋಜಿಸಿದರೂ ಹಿಂಸಾಚಾರದ ನಡುವೆಯೇ ಬಂಗಾಳದಲ್ಲಿ ಶೇ.66.28ರಷ್ಟು ಮತದಾನ ನಡೆದಿದೆ. ಜುಲೈ 11 ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಹಿಂಸಾಚಾರಕ್ಕೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಕಾರಣ ಎಂದು ಬಿಜೆಪಿ ಆರೋಪಿಸಿದೆ ಮತ್ತು ಕೇಂದ್ರ ಏಜೆನ್ಸಿಯಿಂದ ತನಿಖೆಗೆ ಒತ್ತಾಯಿಸಿದೆ. ಚುನಾವಣಾ ಹಿಂಸಾಚಾರದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಬಿಜೆಪಿ ಮುಖಂಡ ಶುಭೇಂದು ಅಧಿಕಾರಿ ಹೇಳಿದರು.