ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕರಾವಳಿಗೆ ರೆಮೆಲ್ ಚಂಡಮಾರುತವು ಬಂದು ಅಪ್ಪಳಿಸಿದ್ದು, ಇದರಿಂದಾಗಿ ಎಲ್ಲೆಡೆ ಭೂಕುಸಿತ ಉಂಟಾಗುತ್ತಿದೆ. ಬಂಗಾಳದಲ್ಲಿ ರೆಮಲ್ ಚಂಡಮಾರುತದ ಅಪ್ಪಳಿಸಿದ ಹಿನ್ನೆಲೆ ಬಿಹಾರದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕೋಲ್ಕತ್ತಾ-ಪಾಟ್ನಾ ನಡುವಿನ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾ ಹೊರತುಪಡಿಸಿ ಬಹುತೇಕ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಈ ರಾಜ್ಯಗಳಲ್ಲಿ ಚಂಡಮಾರುತದ ಪ್ರಭಾವ ಒಂದೆರಡು ದಿನ ಇರಲಿದ್ದು, ಇಂದು ಹಾಗೂ ನಾಳೆ ಅಸ್ಸಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲಪ್ರದೇಶ ಹಾಗೂ ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರೆಮೆಲ್ ಚಂಡಮಾರುತ ಅಪ್ಪಳಿಸಿದ ಹಿನ್ನಲೆ ಪಶ್ಚಿಮ ಬಂಗಾಳದ ಸೂಕ್ಷ್ಮ ಪ್ರದೇಶಗಳ್ಲಿ ವಾಸಿಸುತ್ತಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಬಾಂಗ್ಲಾದೇಶದ ಸೂಕ್ಷ್ಮ ಪ್ರದೇಶಗಳಿಂದ 8 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 21 ಗಂಟೆಗಳ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿದ್ದು, 700ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು ಭಾರತೀಯ ಹವಾಮಾನ ಇಲಾಖೆಯು ಚಿರಾಂಗ್, ಗೋಲ್ಪಾರಾ, ಬಕ್ಸಾ, ದಿಮಾ ಹಸಾವೊ, ಕ್ಯಾಚಾರ್, ಹೈಲಕಂಡಿ ಮತ್ತು ಕರೀಮ್‌ಗಂಜ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ಜೊತೆಗೆ ಧುಬ್ರಿ, ದಕ್ಷಿಣ ಸಲ್ಮಾರಾ, ಬೊಂಗೈಗಾಂವ್, ಬಜಾಲಿ, ತಮುಲ್‌ಪುರ್, ಬಾರ್ಪೇಟಾದಲ್ಲಿ ಆರೆಂಜ್ ಅಲರ್ಟ್ ಜಾರಿ ಗೊಳಿಸಿದೆ.