ಬಂಟ್ವಾಳ:ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಲಾಗಿದ್ದ ಸಾವಿರಾರು ರೂ ನಗದು ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕುಂಪಣಮಜಲು ಎಂಬಲ್ಲಿ ನಡೆದಿದೆ.
ಪುದು ಗ್ರಾ.ಪಂ.ವ್ಯಾಪ್ತಿಯ ಕುಂಪಣಮಜಲು ನಿವಾಸಿ ವಸೀಂ ಅಕ್ರಂ ಎಂಬವರ ಮನೆಯಿಂದ ಕಳವು ನಡೆದಿದೆ.
ಕಪಾಟಿನಲ್ಲಿದ್ದ ಸುಮಾರು 60,000 ಸಾವಿರ ರೂ ನಗದು ಕಳವಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಸೀಂ ಅಕ್ರಂ ಅವರ ಪತ್ನಿ ಕಳೆದ ಆರು ತಿಂಗಳಿನಿಂದ ಉಳ್ಳಾಲದ ತಾಯಿ ಮನೆಯಲ್ಲಿದ್ದು, ವಸೀಂ ಅಕ್ರಂ ರಾತ್ರಿ ಅತ್ತೆ ಮನೆಯಲ್ಲಿ ತಂಗುತ್ತಿದ್ದರು.
ಮನೆಯಲ್ಲಿ ವಸೀಂ ಅಕ್ರಂ ಅವರ ತಾಯಿ ಮಾತ್ರ ವಾಸವಾಗುತ್ತಿದ್ದ ರಾತ್ರಿ ವೇಳೆ ಅವರು ಒಬ್ಬರೇ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣದಿಂದ ಹತ್ತಿರದ ಇನ್ನೊಬ್ಬ ಮಗನ ಮನೆಗೆ ಹೋಗುತ್ತಿದ್ದರು.
ರಾತ್ರಿ ಮಗನ ಮನೆಯಲ್ಲಿ ತಂಗಿ ವಾಪಾಸು ಬೆಳಿಗ್ಗೆ ಇವರ ಮನೆಗೆ ಬರುತ್ತಿದ್ದರು.
ಆದರೆ ಸೆ. 10 ರಂದು ರಾತ್ರಿ ವೇಳೆ ಇವರು ಮನೆಯಿಂದ ತೆರಳಿದ ಬಳಿಕ ಯಾರೋ ಕಳ್ಳರು ಹಿಂಬದಿಯ ಬಾಗಿಲು ಚಿಲಕ ಮುರಿದು ಒಳಗೆ ಪ್ರವೇಶ ಮಾಡಿ ಕೋಣೆಯಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಜಾಲಾಡಿ ಕಪಾಟಿನಲ್ಲಿರಿಸಲಾಗಿದ್ದ ಹಣವನ್ನು ದೋಚಿಕೊಂಡು ಹೋಗಿದ್ದಾರೆ.
ಸೆ.11 ರಂದು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.