ಪಾರಾದೀಪ್: ಬಂದರಿನಲ್ಲಿ ಹಡಗೊಂದರಿಂದ 220 ಕೋಟಿ ರೂ. ಮೌಲ್ಯದ ಕೊಕೇನ್ ಮಾದಕ ವಸ್ತುವನ್ನು ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಗುರುವಾರ ರಾತ್ರಿ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಹಡಗಿನಲ್ಲಿ 22 ಅನುಮಾನಾಸ್ಪದ ಪ್ಯಾಕೆಟ್ ಗಳು ಇರುವುದು ಕಂಡ ಬಂದ ಹಿನ್ನಲೆ ಕ್ರೇನ್ ಆಪರೇಟರ್ ಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ಪ್ಯಾಕೆಟ್ ಗಳನ್ನು ವಿಶೇಷ ಕಿಟ್ ಬಳಸಿ ಪರೀಕ್ಷೆಗೆ ಒಳಪಡಿಸಿದಾಗ ಕೊಕೇನ್ ಎಂದು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ಎಮ್ ವಿ ಡೆಬಿ ಎಂಬ ಹೆಸರಿನ ಸರಕು ಸಾಗಾಟದ ಹಡಗು ಈಜಿಪ್ಟ್ ನಿಂದ ಇಂಡೋನೇಷ್ಯಾದ ಗ್ರೆಸಿಕ್ ಬಂದರಿನ ಮೂಲಕ ಪಾರಾದೀಪ್ ಬಂದರಿಗೆ ಬಂದಿದೆ. ಈ ಬಂದರಿಂದ ಸ್ಟೀಲ್ ಪ್ಲೇಟ್ ಗಳೊಂದಿಗೆ ಡೆನ್ಮಾರ್ಕ್ ಗೆ ಪ್ರಯಾಣ ಬೆಳೆಸುತ್ತಿತ್ತು. ಹಡಗಿನಲ್ಲಿದ್ದ ಕ್ರೇನ್ ನಿಂದ 22 ಕೊಕೇನ್ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ವಸ್ತುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಯು 200 ರಿಂದ 220 ಕೋಟಿ ರೂ ಆಗಿದೆ ಎಂದು ಕಸ್ಟಮ್ಸ್ ಕಮಿಷನರ್ ಮಧಾಬ್ ಚಂದ್ರ ಮಿಶ್ರಾ ಹೇಳಿದ್ದಾರೆ.