ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ಮನೀಶ್ ಸಿಸೋಡಿಯಾ ಜೊತೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಆತಂಕ ಹೆಚ್ಚಾಗಿದೆ. ಸಿಸೋಡಿಯಾ ಜಾಮೀನು ತಿರಸ್ಕೃತ ಗೊಂಡ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್ ನೀಡಿದ್ದಾರೆ. ನವೆಂಬರ್ 2 ರಂದು ವಿಚಾರಣೆ ಹಾಜರಾಗಲು ಸಮನ್ಸ್ ನೀಡಲಾಗಿದೆ. ದೆಹಲಿಯ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 2023ರ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಕ್ಟೋಬರ್ 4ರಂದು ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಇದೀಗ ಅದೇ ಪ್ರಕರಣದಲ್ಲಿ ದೆಹಲಿ ಸಿಎಂಗೆ ಇಡಿ ಸಮನ್ಸ್ ನೀಡಿದೆ. ದೆಹಲಿ ಸರ್ಕಾರವು ನವೆಂಬರ್ 17, 2021 ರಂದು ಈ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತ್ತು. ತನಿಖಾ ಸಂಸ್ಥೆಗಳ ಪ್ರಕಾರ, ಹೊಸ ನೀತಿಯ ಅನುಷ್ಠಾನದಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನಲಾಗಿದೆ. ಸಗಟು ವ್ಯಾಪಾರಿಗಳ ಲಾಭವನ್ನು ಶೇಕಡಾ 5ರಿಂದ 12ಕ್ಕೆ ಹೆಚ್ಚಿಸಲು ಈ ನೀತಿ ಅನುವು ಮಾಡಿಕೊಟ್ಟಿದೆ. ಪರವಾನಗಿ ನೀಡುವುದರಲ್ಲಿ, ಪರವಾನಗಿ ಶುಲ್ಕಗಳ ಮನ್ನಾ ಅಥವಾ ಕಡಿತಗೊಳಿಸುವಲ್ಲಿ, ಎಲ್-1 ಪರವಾನಗಿಯನ್ನು ಅನುಮೋದನೆ ಇಲ್ಲದೆಯೇ ವಿಸ್ತರಿಸುವಲ್ಲಿ ಲಂಚ ಪಡೆದು ಕಂಪೆನಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎನ್ನುವುದು ಈ ಆರೋಪಗಳಲ್ಲಿ ಸೇರಿಸಲಾಗಿದೆ.