ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕೆಲ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ಎನ್ ಬಿ ಎಫ್ ಸಿ ಬಜಾಜ್ ಫೈನಾನ್ಸ್ ಸಂಸ್ಥೆಗೆ, ಅದು ಸಾಲ ನೀಡುವ ಉತ್ಪನ್ನಗಳಾದ ಇಕಾಮ್ ಮತ್ತು ಇನ್ಸ್ಟಾ ಇಎಂಐ ಕಾರ್ಡ್ ಅಡಿಯಲ್ಲಿ ಹಣ ನೀಡುವುದನ್ನು ನಿಲ್ಲಿಸುವಂತೆ ಆರ್ಬಿಐ ತಿಳಿಸಿದೆ.ಈ ಸೂಚನೆಯನ್ನು ನವೆಂಬರ್ 15ರಂದು ನೀಡಲಾಗಿದ್ದು, ತತ್ಕ್ಷಣದಿಂದಲೇ ಜಾರಿಗೆ ಬರುತ್ತದೆ.
ಈ ಎರಡು ಸ್ಕೀಮ್ ವಿಚಾರದಲ್ಲಿ ಸಂಸ್ಥೆಯು ಆರ್ಬಿಐನ ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ, ಈ ಎರಡು ವಿಭಾಗದಲ್ಲಿ ಸಾಲ ಪಡೆಯುವ ಗ್ರಾಹಕರಿಗೆ ಕೆಲ ಪ್ರಮುಖ ಮಾಹಿತಿಯನ್ನು ಬಜಾಜ್ ಫೈನಾನ್ಸ್ ಸಂಸ್ಥೆ ನೀಡಿಲ್ಲ. ಇದು ಪ್ರಮುಖ ನಿಯಮ ಉಲ್ಲಂಘನೆಗಳಲ್ಲಿ ಒಂದು. ಲೋಪದೋಷಗಳನ್ನು ಸರಿಪಡಿಸಿಕೊಂಡ ಬಳಿಕ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದೂ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಜೊತೆಗೆ ಈ ಆದೇಶವನ್ನು ಹೊರಡಿಸಿದ ಭಾರತೀಯ ರಿಸರ್ವ್ ಬ್ಯಾಂಕ್, ”ಕಂಪನಿಯು ಆರ್‌ಬಿಐನ ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಈ ಆದೇಶವನ್ನು ಹೊರಡಿಸಲಾಗಿದೆ” ಎಂದು ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಟಲ್ ಸಾಲದ ಮಾರ್ಗಸೂಚಿಗಳ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಕಂಪನಿಯು ಅನುಸರಿಸದ ಕಾರಣ ಈ ಕ್ರಮ ಅಗತ್ಯವಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.