ಬೆಂಗಳೂರು: ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಎದುರಾಗುವ ಭೀಕರತೆಗೆ ಅನುಗುಣವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಅವರು, ಜನವರಿ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದ್ದು, ದಿನದ 24 ಗಂಟೆಯೂ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬರ ನಿರ್ವಹಣೆಗೆ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಲಾಗಿದೆ. ಈಗಾಗಲೇ 183 ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿನ ಬರಗಾಲ ನಿರ್ವಹಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಶಾಸಕರಿಗೆ ನೀಡಲಾಗಿದೆ.
ಅವರ ಅಧ್ಯಕ್ಷತೆಯಲ್ಲಿಯೇ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರ ಖಾತೆಗಳಿಗೆ ಸುಮಾರು ರೂ. 900 ಕೋಟಿ ಎಸ್.ಡಿ.ಆರ್.ಎಫ್ ಮೂಲಕ ನೀಡಲಾಗಿದ್ದು, ಹಣ ಬಳಕೆಯ ಸಂಪೂರ್ಣ ಅಧಿಕಾರವನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಗಳಿಗೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಎಷ್ಟೇ ಹಣ ಖರ್ಚಾದರೂ ನೀರು, ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಜನರಿಗೆ ಉದ್ಯೋಗದ ಕೊರತೆಯೂ ಆಗದಂತೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು.