ಬೆಂಗಳೂರು: ರಾಜ್ಯ ಸರ್ಕಾರ ಬರ ಪರಿಹಾರ ನೀಡಲು ಆಧಾರ ಜೋಡಣೆಯ ಕುಂಟು ನೆಪ ಹೇಳುತ್ತಿದೆ. ಈಗಾಗಲೇ ಫ್ರುಟ್ ಸಾಫ್ಟವೇರ್ ನಲ್ಲಿ 69 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದ್ದು, ಮುಖ್ಯಮಂತ್ರಿಗಳು ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ನೆಪ ಹೇಳುತ್ತಿದ್ದಾರೆ. ಸರ್ಕಾರ ತಕ್ಷಣ ರೈತರ ಖಾತೆಗಳಿಗೆ 2000. ರೂ. ಹಣ ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಹುತೆಕ ತಾಲುಕುಗಳು ಬರ ಅಂತ ಘೊಷಣೆ ಆಗಿದೆ. ಮುಂಗಾರು, ಹಿಂಗಾರು ವಿಫಲವಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಕಾಮಗಾರಿ ಆರಂಭಿಸಿಲ್ಲ. ಆರು ತಿಂಗಳು ಕಳೆದರೂ ಯಾವುದೇ ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರ ಈಗ ಆಧಾರ ಜೋಡಣೆಯ ನೆಪ ಹೇಳಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಆಹಾರ ಉತ್ಪಾದನೆ ಕಡೆಮೆಯಾಗಲಿದೆ ಅಂತ ಕೃಷಿ ಇಲಾಖೆ ವರದಿ ಹೇಳುತ್ತಿದೆ. ಹೀಗಿದ್ದಾಗೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ. ಹಿಂದೆ ಎಲ್ಲ ಸರ್ಕಾರಗಳು ಕೇಂದ್ರದ ದಾರಿ ಕಾಯದೇ ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದವು. ಬೆಳಗಾವಿ ಅಸೆಂಬ್ಲಿ ಅಧಿವೇಶನಕ್ಕೆ ಮುಂಚೆ ರೈತರ ಬ್ಯಾಂಕ್ ಖಾತೆಗೆ ಪ್ರತಿ ಹೆಕ್ಟೇರ್ ಗೆ 2000 ರೂ. ಹಾಕುವುದಾಗಿ ಹೇಳಿದ್ದೀರಿ, ಈಗ ಆಧಾರ ಲಿಂಕ್ ಮಾಡುವುದಾಗಿ ಹೇಳುತ್ತಿದ್ದೀರಿ. ಈಗಾಗಲೇ ಫ್ರುಟ್ಸ್ ಸಾಪ್ಟ್ ವೇರ್ ನಲ್ಲಿ ಸುಮಾರು 69 ಲಕ್ಷ ರೈತರ ಆಧಾರ ಲಿಂಕ್ ಆಗಿದೆ. ಅದನ್ನು ಮರೆ ಮಾಚಿ ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ಹೇಳುತ್ತಿದ್ದೀರಿ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ ತಕ್ಷಣ 2000 ರೂ. ರೈತರ ಖಾತೆಗೆ ಜಮಾ ಮಾಡಬೇಕು. ರೈತರು ತಿರುಗಿ ಬಿದ್ದರೆ ಯಾವ ಸರ್ಕಾರವೂ ನಡೆಯುವುದು ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.