ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಖಾತೆಗೆ ಬಂದ ಬರ ಪರಿಹಾರ ರೈತರ ಖಾತೆಯಲ್ಲಿ ಜಮೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಅವರು ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಬರ ಪರಿಹಾರಕ್ಕಾಗಿ 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿ ಒಂದು ತಿಂಗಳ ಕಳೆದರೂ, ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಅದನ್ನು ರೈತರ ಬ್ಯಾಂಕ್ ಖಾತೆಗೆ ಹಾಕದೆ ಸತಾಯಿಸುತ್ತಿದೆ. ಒಟ್ಟಿನಲ್ಲಿ ಈ ದರಿದ್ರ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮ್ಮದಿಯಿಲ್ಲ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
10 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂ. ನೀಡುತ್ತೇವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಅವರು, ಅಕ್ಕಿ ಬದಲು ನೀಡುತ್ತಿದ್ದ ದುಡ್ಡನ್ನು ಕಳೆದ ಮೂರು ತಿಂಗಳಿಂದ ನೀಡದೇ ಕನ್ನಡಿಗರಿಗೆ ಪಂಗನಾಮ ಹಾಕಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಜಾರಿಗೊಳಿಸಿದ ಏಕೈಕ ಗ್ಯಾರಂಟಿ ಯಾವುದಾದರೂ ಇದ್ದರೆ ಅದು ಸುಳ್ಳು ಗ್ಯಾರಂಟಿ. ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಯಾಮಾರಿಸುವ ಗ್ಯಾರಂಟಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.