ಬೆಂಗಳೂರು: ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಇನ್ನು ಒಂದೆರಡು ದಿನಗಳಲ್ಲಿ ಶುರುವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಆದರೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಒಟ್ಟಿಗೆ ಜಮೆಯಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡವರಿಗೆ ನಿರಾಶೆ ಕಾದಿದೆ. ಮೊದಲು ಜೂನ್ ತಿಂಗಳ ಹಣವನ್ನು ಖಾತೆಗಳಿಗೆ ವರ್ಗಾವಣೆ ಮಾಡಲು ಸರಕಾರ ನಿರ್ಧರಿಸಿದೆ.ವರಮಹಾಲಕ್ಷ್ಮೀ ಹಬ್ಬಕ್ಕಾಗುವಾಗ ಜೂನ್ ತಿಂಗಳ 2,000 ರೂ. ಖಾತೆಗೆ ಜಮೆಯಾಗಬಹುದು. ಉಳಿದ ಎರಡು ತಿಂಗಳ ಹಣವನ್ನು ಕ್ರಮೇಣ ನೀಡಲಾಗುವುದು. ಸಾಧ್ಯವಾದಷ್ಟು ಬೇಗ ಹಣ ಜಮೆ ಮಾಡಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಸಚಿವೆ ಹೇಳಿದ್ದಾರೆ. ಕೆಲವರಿಗೆ ಜೂನ್ ತಿಂಗಳ ಹಣ ಈಗಾಗಲೇ ಜಮೆಯಾಗಿದೆ. ಸಿಗದವರಿಗೆ ಎರಡು ದಿನಗಳಲ್ಲಿ ಜಮಾ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.ಗೃಹಲಕ್ಷ್ಮಿ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಮಹಿಳೆಯರು ಪ್ರತಿ ತಿಂಗಳು ಈ ಹಣ ಖಾತೆಗೆ ಜಮೆಯಾಗುವುದನ್ನು ಕಾದು ಕುಳಿತಿರುತ್ತಾರೆ. ಕಳೆದ ಮೂರು ತಿಂಗಳಿಂದ ಸರಿಯಾಗಿ ಜಮೆ ಆಗದೆ ಇರುವುದು ಈ ಯೋಜನೆ ಮುಂದುವರಿಯುವ ಬಗ್ಗೆ ಅನುಮಾನ ಮೂಡಿಸಿತ್ತು. ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗಾಗಿಯೇ ಸರಕಾರ ಸುಮಾರು 2500 ಕೋ. ರೂ. ಎತ್ತಿಡಬೇಕಾಗುತ್ತದೆ.ಈ ನಡುವೆ ಕೆಲವರಿಗೆ 10 ತಿಂಗಳಿನಿಂದ ಹಣ ಸರಿಯಾಗಿ ಬರುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.