ಚಿತ್ರದುರ್ಗ: ಬೀದಿ ಬದಿಯಲ್ಲಿ ಸುರಕ್ಷತೆ ಹಾಗೂ ಗುಣಮಟ್ಟವಲ್ಲದ ಆಹಾರ ತಯಾರಿಸಿ ವಿತರಿಸುವುದು ನಿಯಮ ಬಾಹಿರವಾಗಿದ್ದು, ಪ್ರತಿಯೊಬ್ಬರೂ ಆಹಾರ ಸುರಕ್ಷತೆ ಕಾಯ್ದೆಯಡಿ ನೊಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತಾಧಿಕಾರಿ ಡಾ. ಪಾಲಾಕ್ಷ ಅವರು ಹೇಳಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತಂತೆ ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು ಮೂಡಿಸಲು ನಗರಸಭಾ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೀದಿ ಬದಿಗಳಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮತ್ತು ಗುಣಮಟ್ಟವಲ್ಲದ ಆಹಾರ ತಯಾರಿಸಿ ನೀಡುವುದರಿಂದ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ರಾಜ್ಯ ಸರ್ಕಾರವು ಕೂಡ ಇತ್ತೀಚೆಗೆ ಗೋಭಿ ಮಂಚೂರಿಗೆ ಬಣ್ಣ ಹಾಕುವುದನ್ನು ನಿಷೇಧಿಸಿದ್ದು, ಗೋಭಿ ಮಂಚೂರಿಗೆ ಬಣ್ಣ ಹಾಕಿ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಆಹಾರ ತಯಾರಿಸಿ ನೀಡುವಂತಹ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರು ಕೂಡ ಆಹಾರ ಸುರಕ್ಷತೆ ಕಾಯ್ದೆಯಡಿ ನೊಂದಣಿ ಹಾಗೂ ಪರವಾನಿಗಿ ಪಡೆಯುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತಾಧಿಕಾರಿ ಡಾ. ಪಾಲಾಕ್ಷ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತೆ ರೇಣುಕಾ, ಸಮುದಾಯ ಸಂಘಟಕರಾದ ಕೆಂಚಪ್ಪ, ನಗರಸಭೆ ಪರಿಸರ ಅಭಿಯಂತರ ವಾಸಿಂ ಜಾಫರ್ ಉಪಸ್ಥಿತರಿದ್ದರು. ನಗರದ ಬೀದಿ ಬದಿ ವ್ಯಾಪಾರಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.