ಮಹಾರಾಷ್ಟ್ರ: 12ನೇ ವಯಸ್ಸಿಗೆ ಬಲವಂತವಾಗಿ ಮದುವೆಯಾಗಿ ಗಂಡನ ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿ ಬಳಿಕ ಕಷ್ಟಪಟ್ಟು 900 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದ ಮಹಾರಾಷ್ಟ್ರದ ಕಲ್ಪನಾ ಸರೋಜ್ ಅವರ ಕಥೆ ಇದು.
ಕಲ್ಪನಾ ಸರೋಜ್ ಅವರು ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಅವರ ಕಥೆಯು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.
1961 ರಲ್ಲಿ ಮಹಾರಾಷ್ಟ್ರದ ಅಕೋಲಾದಲ್ಲಿ ಜನಿಸಿ ಕಲ್ಪನಾ ಸರೋಜ್ ಮೂರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯರು. ಸರೋಜ್ ಅವರ ತಂದೆ ಅಕೋಲಾದ ರೆಪತ್ಖೇಡ್ ಗ್ರಾಮದಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದ್ದಾರೆ.
ಕಲ್ಪನಾ ಸರೋಜ್ ಅವರು ತನ್ನ 12 ನೇ ವಯಸ್ಸಿನಲ್ಲಿ ವಿವಾಹವಾಗಿ ಗಂಡನ ಕುಟುಂಬದೊಂದಿಗೆ ಮುಂಬೈನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದರು. ತನ್ನ ಗಂಡನ ಕುಟುಂಬ ಸದಸ್ಯರ ಕೈಯಲ್ಲಿ ದೈಹಿಕ ಕಿರುಕುಳವನ್ನು ಅನುಭವಿಸಿದ ನಂತರ ಆಕೆಯ ತಂದೆಯ ಸಹಾಯದಿಂದ ಪತಿಯನ್ನು ತೊರೆದು ತನ್ನ ಹಳ್ಳಿಗೆ ಹಿಂದಿರುಗಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.
ಇನ್ನು ಗ್ರಾಮಸ್ಥರ ಬಹಿಷ್ಕಾರದಿಂದ ಮನನೊಂದು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದ ಕಲ್ಪನಾ ಸರೋಜ್ 16ನೇ ವಯಸ್ಸಿನಲ್ಲಿ ತನ್ನ ಚಿಕ್ಕಪ್ಪನೊಂದಿಗೆ ವಾಸಿಸಲು ಮುಂಬೈಗೆ ತೆರಳಿ ಅಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಬಳಿಕ ಪರಿಶಿಷ್ಟ ಜಾತಿಯ ಜನರಿಗೆ ಸರ್ಕಾರ ನೀಡುವ ಸಾಲವನ್ನು ಬಳಸಿಕೊಂಡು ಟೈಲರಿಂಗ್ ವ್ಯಾಪಾರವನ್ನು ಮತ್ತು ಪೀಠೋಪಕರಣ ಅಂಗಡಿಯನ್ನು ಪ್ರಾರಂಭಿಸಿ ಯಶಸ್ವಿಯಾದರು.
ಕಲ್ಪನಾ ಸರೋಜ್ ಅವರು ಕೆಎಸ್ ಫಿಲ್ಮ್ ಪ್ರೊಡಕ್ಷನ್ ಅನ್ನು ಪ್ರಾರಂಭಿಸಿ ಅದರಲ್ಲಿ ಮೊದಲ ಚಲನಚಿತ್ರವನ್ನು ಇಂಗ್ಲಿಷ್, ತೆಲುಗು ಮತ್ತು ಹಿಂದಿಯಲ್ಲಿ ಡಬ್ ಮಾಡಿದರು. ಖೈರಲಂಜಿ ಚಲನಚಿತ್ರವನ್ನು ಕಲ್ಪನಾ ಸರೋಜ್ ಅವರ ಬ್ಯಾನರ್ ಅಡಿಯಲ್ಲಿ ದೀಲಿಪ್ ಮ್ಹಾಸ್ಕೆ, ಜ್ಯೋತಿ ರೆಡ್ಡಿ ಮತ್ತು ಮನ್ನನ್ ಗೋರ್ ನಿರ್ಮಿಸಿದ್ದಾರೆ. ಬಳಿಕ ಕಲ್ಪನಾ ಸರೋಜ್ ಅವರು ಯಶಸ್ವಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಮಿಸಿ ಸಂಪರ್ಕ ಮತ್ತು ಉದ್ಯಮಶೀಲತಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ.