ಬಾಲ್ಯ ವಿವಾಹ ಎಂಬ ಪಿಡುಗು ತೊಲಗಿಸಲು ಕೈ ಜೋಡಿಸಿ: ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆರ್.ನಟರಾಜ್ ಕರೆ

WhatsApp
Telegram
Facebook
Twitter
LinkedIn

ಚಿತ್ರದುರ್ಗ: ಬಾಲ್ಯ ವಿವಾಹ ಎಂಬ ಸಾಮಾಜಿಕ ಪಿಡುಗು ತೊಲಗಿಸಲು ಎಲ್ಲಾ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಚಿತ್ರದುರ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ನಟರಾಜ್ ಕರೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಬಾಲ್ಯ ವಿವಾಹ ಮತ್ತು ಬಾಲ್ಯ ಗರ್ಭಾವಸ್ಥೆ ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಎಂಬ ಪಿಡುಗು ಬಹುಕಾಲದಿಂದಲೂ ಭಾರತ ಸೇರಿದಂತೆ ಪ್ರಪಂಚದ ವಿವಿಧ ರಾಷ್ಟçಗಳಲ್ಲಿ ಅಸ್ತಿತ್ವದಲ್ಲಿದೆ. ನಾನಾ ಕಾರಣಗಳಿಂದ ಬಾಲ್ಯ ವಿವಾಹ ಪದ್ದತಿ ಬೆಳೆದು ಬಂದಿದೆ. ಬಡತನ ಹಾಗೂ ಅನಕ್ಷರತೆ ಬಾಲ್ಯವಿವಾಹಕ್ಕೆ ಕಾರಣವಾಗಿವೆ. ದೇಶದಲ್ಲಿ ಮದುವೆಗೆ ಹೆಣ್ಣುಮಕ್ಕಳ ಸಮ್ಮತಿ ಪಡೆಯುವ ವಯಸ್ಸನ್ನು ಕಾಲ ಕಾಲಕ್ಕೆ ಹೆಚ್ಚಿಸುತ್ತಾ ಬರಲಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1929ರಲ್ಲಿ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಜಾರಿಗೊಳಿಸಲಾಯಿತು. 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಬಾಲ್ಯ ವಿವಾಹ ತಡೆ ಹೆಚ್ಚಿನ ಕಾನೂನಿನ ಬಲ ನೀಡಲಾಗಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ದೇಶದಲ್ಲಿ 2.30 ಕೋಟಿ ಬಾಲವಧುಗಳು ಇದ್ದಾರೆ.

ಕರ್ನಾಟಕ ರಾಜ್ಯದಲ್ಲಿ 1.33 ಲಕ್ಷ ಬಾಲವಧುಗಳು ಇರುವುದು ತಿಳಿದು ಬಂದಿದೆ. ಈ ಸಂಖ್ಯೆಗಳು ಬಾಲ್ಯ ವಿವಾಹ ಎಂಬ ಪಿಡುಗಿನ ವ್ಯಾಪಕತೆಯನ್ನು ಸ್ಪಷ್ಟಪಡಿಸುತ್ತವೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಬಾಲ್ಯ ವಿವಾಹ ತಡೆಗಟ್ಟುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಳ್ಳಿಗಳಲ್ಲಿ ಕೆಲಸ ಮಾಡುವ ಎಲ್ಲಾ ಇಲಾಖೆ ನೌಕರರು ಬಾಲ್ಯ ವಿವಾಹದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಅದರ ತಡೆಗೆ ಪ್ರಯತ್ನಿಸಬೇಕು.

ಬಾಲ್ಯವಿವಾಹದ ಕುರಿತು ಸಹಾಯವಾಣಿಗೆ ಬಂದ ದೂರುಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಬಾಲ್ಯ ವಿವಾಹ ತಡೆಗಟ್ಟಿದೆ. ಆದರೂ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬAದಿದೆ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.

ಬಾಲ್ಯ ವಿವಾಹ ಮಾದರಿಯಲ್ಲಿ ಬಾಲ ಗರ್ಭಾವಸ್ಥೆಯೂ ಕೂಡ ಪಿಡುಗಾಗಿ ಪರಿಣಮಿಸಿದೆ. ಹದಿಹರೆಯದ ಯುವಕ ಯುವತಿಯರು ದೈಹಿಕ ತುಡಿತ, ಕುತೂಹಲ ಹಾಗೂ ಆಸೆಗೆ ಒಳಗಾಗಿ ಇಂತಹ ದುಸ್ಥಿತಿ ತಲುಪುತ್ತಾರೆ. ದೈಹಿಕ ಹಾಗೂ ಮಾನಸಿಕವಾಗಿ ಸಧೃಡವಾಗಿರದ ಬಾಲಕಿಯರು ಗರ್ಭಧಾರಣೆ ಒಳಗಾಗಿ ನಾನಾ ಸಂಕಷ್ಟಗಳಿಗೆ ತುತ್ತಾಗುತ್ತಾರೆ. 18 ವರ್ಷ ಒಳಗಿನ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ. ಮಕ್ಕಳ ದೌರ್ಜನ್ಯದ ಸಂಗತಿಗಳು ಕಂಡುಬAದ ತಕ್ಷಣವೇ ದೂರು ದಾಖಲಿಸಬೇಕು. ಬಾಲ್ಯ ವಿವಾಹ ಹಾಗೂ ಬಾಲಗರ್ಭಾವಸ್ಥೆ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ನ್ಯಾಯಮೂರ್ತಿ ಆರ್. ನಟರಾಜ್ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ ಮಾತನಾಡಿ, ಬಾಲ್ಯ ವಿವಾಹ ಹಾಗೂ ಬಾಲ್ಯ ಗರ್ಭಾವಸ್ಥೆ ಪ್ರಕರಣಗಳಲ್ಲಿ ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಬಾಲ್ಯವಿವಾಹ ತಡೆಯುವುದು ಕೇವಲ ಒಂದು ಇಲಾಖೆ ಜವಾಬ್ದಾರಿ ಮಾತ್ರ ಅಲ್ಲ. ಎಲ್ಲ ಇಲಾಖೆಗಳು ಸೇರಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಬಾಲ್ಯ ವಿವಾಹ ಆಗುವುದನ್ನು ತಡೆಗಟ್ಟೋಣ ಎಂದು ತಿಳಿಸಿದ ಅವರು, ರಾಜ್ಯದಲ್ಲಿ 5ನೇ ಸ್ಥಾನ ಪಡೆದಿರುವ ಚಿತ್ರದುರ್ಗ ಜಿಲ್ಲೆಯನ್ನು ಹೊರಗಡೆ ತರಲು ದೃಢನಿಶ್ಚಯ ಮಾಡೋಣ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರೂ ಸೇರಿ ವಿವಿಧ ಇಲಾಖೆಗಳ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಬಾಲ್ಯವಿವಾಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಬಾಲ್ಯವಿವಾಹ ಕುರಿತು ಜಾಗೃತಿ ಅಂದೋಲನದ ಮೂಲಕ ಮನವರಿಕೆ ಮಾಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನಿತ್ಯವೂ ಮಕ್ಕಳ ಹಾಜರಾತಿ ಟ್ರಾö್ಯಕಿಂಗ್ ಮಾಡಲಾಗುತ್ತಿದ್ದು, ದೀರ್ಘಕಾಲದ ಗೈರು ಹಾಜರಿ ಆಗುವ ಹೆಣ್ಣು ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಮೇಲೆ ನಿಗಾವಹಿಸಲಾಗುತ್ತಿದೆ. ಬಾಲ್ಯವಿವಾಹ ಜಿಲ್ಲೆಗೆ ಅಂಟಿರುವ ಕಳಂಕ, ಶಾಪವಾಗಿದ್ದು, ಇದರ ವಿಮೋಚನೆ ಆಗಲೇಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಹೆಚ್ಚಾಗಿರುವ ಬಾಲ್ಯವಿವಾಹ ಹಾಗೂ ಬಾಲ್ಯಗರ್ಭಾವಸ್ಥೆ ಪ್ರಕರಣಗಳನ್ನು ಹಂತ ಹಂತವಾಗಿ ಇಳಿಮುಖವಾಗಿಸುವ ನಿಟ್ಟಿನಲ್ಲಿ ಬಾಲ್ಯವಿವಾಹವನ್ನು ತೊಲಗಿಸಲು ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು, ನೌಕರರು ತಮ್ಮ ಕಾರ್ಯತತ್ಪರತೆಯನ್ನು ಕ್ಷೇತ್ರಮಟ್ಟದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಬಾಲ್ಯವಿವಾಹ ನಿಯಂತ್ರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಾಲ್ಯವಿವಾಹ ಹಾಗೂ ಬಾಲ್ಯ ಗರ್ಭಾವಸ್ಥೆ ಪ್ರಕರಣಗಳನ್ನು ಸವಾಲಾಗಿ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು. ಈ ಪಿಡುಗುಗಳು ಮಕ್ಕಳ ಮೇಲೆ ಬಹಳಷ್ಟು ದುಷ್ಪಾರಿಣಾಮ ಬೀರಲಿದೆ. ಇದರಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಹೌದು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮುಖ್ಯ ಮುಖ್ಯ ಜವಾಬ್ದಾರಿ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದೇ ಆಗಿದೆ. ಹಾಗಾಗಿ ನಾವೆಲ್ಲರೂ ಸಮನ್ವಯತೆ, ಬದ್ಧತೆ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon