ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಅವರ ಪುತ್ರಿ, ಬಿಆರ್ ಎಸ್ ನಾಯಕಿ ಕೆ. ಕವಿತಾ ಅವರನ್ನು 3 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಲಾಗಿದೆ.
ಇತ್ತೀಚೆಗೆ ಸಿಬಿಐ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಿಂದಲೇ ಕವಿತಾ ಅವರನ್ನು ವಶಕ್ಕೆ ಪಡೆದ ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಇದೀಗ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಕವಿತಾ ಅವರನ್ನು ಏ.15 ರ ವರೆಗೆ ಸಿಬಿಐ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.
ಇನ್ನು ತಿಹಾರ್ ಜೈಲಿನಲ್ಲಿದ್ದ ಕವಿತಾ ಅವರನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಸಿಬಿಐ ಬಂಧಿಸಿತ್ತು. ಮದ್ಯದ ಪರವಾನಿಗೆಗಾಗಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂ. ಲಂಚ ನೀಡುವ ಸಂಬಂಧ ಸಾಕ್ಷಿ ಹೇಳಿಕೆಗಳು, ವಾಟ್ಸಾಪ್ ಚಾಟ್‌ಗಳು ಮತ್ತು ಹಣಕಾಸಿನ ದಾಖಲೆಗಳು ಅವರನ್ನು ಸಂಚು ರೂಪಿಸಿದವರಲ್ಲಿ ಪ್ರಮುಖರೆಂದು ಸಿಬಿಐ ಕೋರ್ಟ್ ಗೆ ತಿಳಿಸಿದ್ದು, ಐದು ದಿನಗಳ ಕಾಲ ಕವಿತಾ ಅವರನ್ನು ಸಿಬಿಐ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಮನವಿ ಮಾಡಿಕೊಂಡಿತ್ತು.