ಬೆಂಗಳೂರು:ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಬಸ್ ಚಾಲಕನ ಅಜಾಗರೂಕತೆಯಿಂದ ಬಸ್ ಡಿಕ್ಕಿಯಾಗಿ ಗೃಹಿಣಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ಸೀಮಾ (21) ಮೃತ ಗೃಹಿಣಿಯಾಗಿದ್ದು ನಿನ್ನೆ ಸಂಜೆ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಮಡಿವಾಳ ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ.
ಕಳೆದ ಎರಡೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಈ ದಂಪತಿ ಇಲ್ಲಿನ ಸಿಂಗಸಂದ್ರ ವಾಸವಾಗಿದ್ದರು.
ನಿನ್ನೆ ಸಂಜೆಯ ವೇಳೆ ಪ್ರೋ ಕಬಡಿ ಪಂದ್ಯ ವೀಕ್ಷಿಸಲು ತಮ್ಮ ಪುಟ್ಟ ಮಗುವಿನ ಜೊತೆ ಬೈಕ್ ನಲ್ಲಿ ಹೋಗುವಾಗ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.ಪರಿಣಾಮ ಮೂವರು ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಬಿಎಂಟಿಸಿ ಬಸ್ ನ ಚಕ್ರದಡಿ ಸಿಲುಕಿದ ಸೀಮಾ ಹೆಲ್ಮೆಟ್ ಧರಿಸಿದ್ದರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮಗು ಗಾನವಿ,ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಅಪಘಾತದ ಬಳಿಕ ಚಾಲಕ ,ಬಸ್ ನಿವಾರ್ಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ಬಳಿಕ ಯಾವ ಒಬ್ಬ ಬಿಎಂಟಿಸಿ ಅಧಿಕಾರಿಯೂ ಬಂದಿಲ್ಲ. ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಶ್ರೀಕಂಠಪುರ ತಾಂಡಾದ ನಿವಾಸಿಗಳಾದ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು.
ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಗುರುಮೂರ್ತಿ ಕೆಲಸ ಮಾಡುತ್ತಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸೀಮಾ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.