ಮುಂಬೈ: ಬಿಎಂಡಬ್ಲ್ಯೂ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮಿಹಿರ್ ಶಾನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಬಿಎನ್‌ಎಸ್ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೆಕ್ಷನ್ 105, 281, 125(ಬಿ), 238, 324(೪), 184, 134(ಎ), 134(ಬಿ), ಮತ್ತು 187 ಸೇರಿದಂತೆ ಹಲವಾರು ಸೆಕ್ಷನ್ ಅಡಿಯಲ್ಲಿ ಶಾ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಬೆಳಗ್ಗೆ ಶಿವಸೇನಾ ಮುಖಂಡ ರಾಜೇಶ್ ಶಾ ವರ ಪುತ್ರ ಮಿಹಿರ್ ಶಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಮುಂಬೈನ ವರ್ಲಿಯಲ್ಲಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಮಹಿಳೆ ಸಾವನ್ನಪ್ಪಿ, ಅವರ ಪತಿಗೆ ಗಾಯಗಳಾಗಿತ್ತು. ಇನ್ನು ಅಪಘಾತ ಸಂಭವಿಸಿದ ದಿನದಿಂದ ಆರೋಪಿ ಮಿಹಿರ್ ಶಾ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮಿಹಿರ್ ಶಾ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಆತನ ತಂದೆ ರಾಜೇಶ್ ಶಾ ಮತ್ತು ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಜುಲೈ 08ರಂದು ದಾದರ್ ಸೆವ್ರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜೇಶ್ ಶಾ ಅವರಿಗೆ 15,000 ನಗದು ಪಾವತಿಸಿ ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತು. ಜೊತೆಗೆ ಕಾರು ಚಾಲಕನನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು.