ಶ್ರೀನಗರ: ಜಮ್ಮುವಿನ ಅಂತರರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಐದು ಬಿಎಸ್ಎಫ್ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ರೇಂಜರ್‌ಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಪರಿಣಾಮ ಓರ್ವ ಬಿಎಸ್‌ಎಫ್ ಯೋಧ ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರ್ನಿಯಾ ಸೆಕ್ಟರ್ನಲ್ಲಿ ನಿನ್ನೆ (ಗುರುವಾರ) ರಾತ್ರಿ 8 ಗಂಟೆ ಸುಮಾರಿಗೆ ಪಾಕಿಸ್ತಾನ ರೇಂಜರ್ಗಳಿಂದ ಗುಂಡಿನ ದಾಳಿ ಆರಂಭವಾಗಿತ್ತು. ಈ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್ಎಫ್ ಪಡೆ ದಿಟ್ಟ ಉತ್ತರ ನೀಡುತ್ತಿದೆ. ಪ್ರಸ್ತುತ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನದ ದಾಳಿಯಿಂದ ಅರ್ನಿಯಾ ಮತ್ತು ಜಬೋವಾಲ್‌ನಲ್ಲಿನ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತೊರೆಯುತ್ತಿದ್ದು, ಗಡಿ ಭಾಗದ ವಿವಿಧ ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಬಂಕರ್‌ಗಳಲ್ಲಿ ಆಶ್ರಯ ಪಡೆದಿವೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಿಎಸ್ಎಫ್ ಪ್ರತಿ ದಾಳಿಯಿಂದ ಪಾಕಿಸ್ತಾನದ ಎಷ್ಟು ಪೋಸ್ಟ್ಗಳಿಗೆ ಹಾನಿಯಾಗಿದೆ ಎಂಬ ವಿಚಾರ ಇಂದು ತಿಳಿದುಬರಲಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ರೇಂಜರ್‌ಗಳು ಜನವಸತಿ ಪ್ರದೇಶಗಳಲ್ಲಿ ಮಾರ್ಟರ್ ಶೆಲ್‌ಗಳನ್ನು ಹಾರಿಸಿದ್ದಾರೆ. ಇದರಿಂದ ಗಡಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಅರ್ನಿಯಾ, ಸುಚ್ಟ್‌ಗಢ್, ಸಿಯಾ, ಜಬೋವಾಲ್ ಮತ್ತು ಟ್ರೆವಾ ಪೋಸ್ಟ್ಗಳು ದಾಳಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.