ಯಾರಿಗಾದರೂ ಬಿಕ್ಕಳಿಕೆ ಬಂದಾಗ ಯಾರೋ ನಿಮ್ಮನ್ನು ನೆನಪಿಸಿಕೊಳ್ಳುತ್ತಿರಬಹುದು. ಹಾಗಾಗಿ ಬಿಕ್ಕಳಿಕೆಗಳು ಬರುತ್ತವೆ ಎಂದೇ ಜನರು ಭಾವಿಸುತ್ತಾರೆ. ಆದರೆ ವಿಜ್ಞಾನಿಗಳು ಹೇಳುವುದೇ ಬೇರೆ. ಬಿಕ್ಕಳಿಕೆ ಬರುವುದರ ಹಿಂದೆ ನಾನಾ ಕಾರಣಗಳಿವೆ ಎಂದು ತಿಳಿಸುತ್ತಾರೆ. ಹಾಗಾದರೆ ಬಿಕ್ಕಳಿಕೆಗೆ ಕಾರಣ ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳೇನು ಎಂಬ ಬಗ್ಗೆ ಕೆಲವೊಂದಷ್ಟು ಮಾಹಿತಿ ಇಲ್ಲಿದೆ ನೋಡಿ.
ಹೊಟ್ಟೆಯಿಂದ ಹೃದಯ ಮತ್ತು ಶ್ವಾಸಕೋಶವನ್ನು ಬೇರ್ಪಡಿಸುವ ಸ್ನಾಯುವಿನ ಪೊರೆಯನ್ನು ಡಯಾಫ್ರಾಮ್ ಎಂದು ಕರೆಯಲಾಗುತ್ತದೆ. ಗಂಟಲಿನ ಕೆನಾಲ್ ನಲ್ಲಿ ಬಿಕ್ಕಳಿಕೆ ಗಳು ಉಂಟಾಗುತ್ತವೆ. ಇದು ನಿಮ್ಮ ಸ್ನಾಯುಗಳ ಅನೈಚ್ಛಿಕ ಕ್ರಿಯೆ. ಡಯಾಫ್ರಯಾಮ್ ಸ್ನಾಯುಗಳು ಇದ್ದಕ್ಕಿದ್ದಂತೆ ಕುಗ್ಗಿದಾಗ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆಗ ಬಿಕ್ಕಳಿಕೆ ಆರಂಭ ಆಗುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಈ ಬಿಕ್ಕಳಿಕೆಗಳು ನಿಲ್ಲುತ್ತವೆ. ಒಂದು ವೇಳೆ ನಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಬಿಕ್ಕಳಿಕೆಗೆ ಕಾರಣಗಳು: ಅತಿಯಾದ ಮದ್ಯಪಾನ ಮತ್ತು ಧೂಮಪಾನ, ಭಯ, ಒತ್ತಡ, ಅತಿಯಾದ ಉತ್ಸಾಹ, ಗಾಳಿಯ ಉಷ್ಣಾಂಶದಲ್ಲಿ ಬದಲಾವಣೆ, ಆಹಾರವನ್ನು ಸರಿಯಾಗಿ ಅಗಿಯದೇ ಇರುವುದು, ತುಂಬಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಬಿಕ್ಕಳಿಕೆಗೆ ಕಾರಣವಾಗಬಹುದು. ಬಿಕ್ಕಳಿಕೆ ನಿಲ್ಲಿಸಲು ಕೆಲವು ಮನೆಮದ್ದುಗಳು: ಜೇನುತುಪ್ಪ ಅಥವಾ ಸಕ್ಕರೆಯೊಂದಿಗೆ ನೀರು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ, ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪುದೀನ ಎಲೆಗಳು, ನಿಂಬೆ ರಸ ಮತ್ತು ಚಿಟಿಕೆ ಉಪ್ಪು ಸೇರಿಸಿ. ಈ ನೀರನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ಟ್ ನಿವಾರಣೆಯಾಗುತ್ತದೆ ಮತ್ತು ಬಿಕ್ಕಳಿಕೆ ನಿಲ್ಲುತ್ತದೆ. ಏಲಕ್ಕಿ ನೀರು ಕೂಡ ಬಿಕ್ಕಳಿಕೆ ನಿಲ್ಲಿಸಲು ಸಹಕಾರಿ ಆಗಿದೆ. ಎರಡು ಏಲಕ್ಕಿಯೊಂದಿಗೆ ನೀರನ್ನು ಕುದಿಸಿ ಕುಡಿಯಿರಿ, ಒಂದು ಚಮಚ ಇಂಗು ಪುಡಿಯನ್ನು ತೆಗೆದುಕೊಂಡು ಅದನ್ನು ಅರ್ಧ ಚಮಚ ತುಪ್ಪದೊಂದಿಗೆ ಬೆರೆಸಿ ತಿನ್ನಿ. ಇದರಿಂದ ಬಿಕ್ಕಳಿಕೆ ನಿಲ್ಲಬಹುದು, ಹೆಚ್ಚು ಬಿಕ್ಕಳಿಕೆ ಇದ್ದರೆ ನಿಂಬೆ ಹಣ್ಣಿನ ರಸ ಸೇವಿಸಿ. ಇದು ಉತ್ತಮ ಪರಿಹಾರವನ್ನು ನೀಡಬಹುದು.