ಬಿಗ್‌ಬಾಸ್ ಸೀಸನ್ 11ರಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಗ್‌ಬಾಸ್ ಸ್ಪರ್ಧಿ ಜಗದೀಶ್ ಅವರು ಕೊನೆಗೂ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳ ಜೊತೆ ಜಗದೀಶ್ ಗಲಾಟೆ, ಕೂಗಾಟ, ಜಗಳ ಜೋರಾಗಿತ್ತು. ಬಿಗ್ ಬಾಸ್ ಮನೆಯ ಗಲಾಟೆಯಲ್ಲಿ ದೈಹಿಕವಾಗಿ ಹಲ್ಲೆ ಮಾಡುವ ಹಂತಕ್ಕೆ ಜಗಳಗಳು ನಡೆದಿತ್ತು. ಹೀಗಾಗಿ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ಇರಲಿಲ್ಲ. ಆದರೆ, ಇದೀಗ ಬಿಗ್ ಬಾಸ್ ಮನೆಗೆ ಜಗದೀಶ್ ಅವರು ಗುಡ್ ಬೈ ಹೇಳಿರೋದು ದೃಢಪಟ್ಟಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಜಗದೀಶ್, ಉಗ್ರಂ ಮಂಜು, ರಂಜಿತ್ ಅವರ ಜೊತೆ ಅತಿರೇಕದ ಜಗಳ ನಡೆದಿತ್ತು. ಇದಾದ ಮೇಲೆ ಜಗದೀಶ್ ಹಾಗೂ ರಂಜಿತ್ ಅವರನ್ನ ಎಲಿಮಿನೇಟ್ ಮಾಡಿದ್ದಾರೆ ಅನ್ನೋ ಸುದ್ದಿಯಾಗಿತ್ತು. ಇದೀಗ ಬಿಗ್ ಬಾಸ್ ಮನೆಯಿಂದ ಜಗದೀಶ್ ಅವರು ಔಟ್ ಆಗಿದ್ದು, ಈ ಬಗ್ಗೆ ಖುದ್ದು ಜಗದೀಶ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಗದೀಶ್ ಅವರು ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲ ಮಾಧ್ಯಮ ಪ್ರತಿನಿಧಿಗಳಿಗೆ ಸಂದೇಶ ರವಾನಿಸಿರುವ ಜಗದೀಶ್, ‘ನೂರಾರು ಕ್ಯಾಮೆರಾ, ಸಾವಿರಾರು ಬಿಗ್‌ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್‌ಬಾಸ್ ಅಭಿಮಾನಿ ದೇವರುಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ’ ಎಂದಿದ್ದಾರೆ. ಮುಂದುವರೆದು, ‘ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್‌ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು’ ಎಂದು ಬಿಗ್‌ಬಾಸ್ ಕಾರ್ಯಕ್ರಮವನ್ನು ಹೊಗಳಿದ್ದಾರೆ.
‘ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲ ತುಂಬಾ ಚಿಕ್ಕ ವಯಸ್ಸಿನಲ್ಲೇ ಅಧ್ಭುತ ಕಲಾವಿದರು, ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿದೆ, ಅದು ನಟನೆ ಅಥವಾ ಮನರಂಜನೆಯ ಒಂದು ಭಾಗವಷ್ಟೆ, ವೈಯಕ್ತಿಕ ದ್ವೇಷ ಯಾವುದೂ ಇಲ್ಲ’ ಎಂದಿದ್ದಾರೆ ಜಗದೀಶ್. ಮಾಧ್ಯಮಗಳನ್ನು ಭೇಟಿ ಆಗಲು ಕಾಯುತ್ತಿದ್ದೇನೆ ಎಂದಿರುವ ಜಗದೀಶ್, ಭಾನುವಾರದಂದು ಜಕ್ಕೂರು ಏರೋಸ್ಪೇಸ್ ಬಳಿ ಸುದ್ದಿಗೋಷ್ಠಿ ನಡೆಸಲಿದ್ದೇನೆ’ ಎಂದಿದ್ದಾರೆ.
