ಮಧ್ಯಪ್ರದೇಶ: ಬಿಜೆಪಿ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಯೊಬ್ಬರನ್ನು ಸಂಬಂಧಿಕನೊಬ್ಬ ಥಳಿಸಿರುವ ಘಟನೆ ಮಧ್ಯಪ್ರದೇಶದ ಸೆಹೋರ್ನ ಎಂಬಲ್ಲಿ ನಡೆದಿದೆ.
ಸಮೀನಾ ಬಿ(30) ಸೋದರ ಮಾವನಿಂದ ಥಳಿತಕ್ಕೆ ಒಳಗಾದ ಮಹಿಳೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮೀನಾ ಬಿ ಅವರು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿದ್ದರು
.
ಡಿಸೆಂಬರ್ 4, 2023 ರಂದು ಸೆಹೋರ್ನ ಅಹ್ಮದ್ಪುರ ಪ್ರದೇಶದಲ್ಲಿ ಬಿಜೆಪಿ ಪಕ್ಷ ಪ್ರಚಂಡ ವಿಜಯವನ್ನು ದಾಖಲಿಸಿದೆ.
ಇದರ ಗೆಲುವನ್ನು ಸಮೀನಾ ಅವರು ಸಂಭ್ರಮಿಸಿದರು. ಆಗ ಬಿಜೆಪಿಗೆ ಯಾಕೆ ಮತ ಹಾಕಿದೆ ಎಂದು ಸೋದರ ಮಾವ ಜಾವೇದ್ ಪ್ರಶ್ನಿಸಿ ಕೋಲಿನಿಂದ ಸರಿಯಾಗಿ ಥಳಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಇದರಿಂದ ಸಮೀನಾ ಅವರ ಕೈಗಳು ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಇಷ್ಟು ಮಾತ್ರವಲ್ಲದೆ, ಬಿಜೆಪಿಗೆ ಬೆಂಬಲ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಪೊಲೀಸರು ಸೆಕ್ಷನ್ 294 (ಸಾರ್ವಜನಿಕವಾಗಿ ಅಶ್ಲೀಲ ಪದಗಳ ಬಳಕೆಗೆ ಸಂಬಂಧಿಸಿದಂತೆ), ಸೆಕ್ಷನ್ 323, (ಯಾವುದೇ ವ್ಯಕ್ತಿಗೆ ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವ ಸಂಬಂಧ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ) ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.