ಮೈಸೂರು: ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂದು ಸ್ವಪಕ್ಷ ಬಿಜೆಪಿ ವಿರುದ್ಧವೇ ಶಾಸಕ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲಿದ್ದವನು. ಅವರಾಗೆ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಹೇಳುತ್ತಾರೆ. ನನ್ನನ್ನ ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ ಎಂದು ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗ್ಯಾರಂಟಿ, ಅದನ್ನ ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ ಎಂದರು.ಸರ್ಕಾರ ಯಾವುದಾದರೂ ಇರಲಿ. ಜನಕ್ಕೆ ಒಳ್ಳೆಯದು ಮಾಡುವುದು ಬೇಡವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಶ್ವರಪ್ಪನಿಗೆ ಯಾವುದೇ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟುಹೋಗು ಅಂತ ಹೇಳಲು ಈಶ್ವರಪ್ಪ ಯಾರು? ರಾಜ್ಯಾಧ್ಯಕ್ಷನ, ಈಶ್ವರಪ್ಪ ನಂಬಿ ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪ ನಂಬಿ ಪಕ್ಷಕ್ಕೆ ಬಂದಿದ್ದೇನೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ 5 ಜನರು ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆ. ಇದಕ್ಕೆ ಮಹತ್ವ ಬೇಡ ಎಂದು ತಿಳಿಸಿದರು.