ಬೆಂಗಳೂರು: ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಬಗ್ಗೆ ಸ್ಪೀಕರ್ ಯುಟಿ ಖಾದರ್ ಗುರುವಾರ ಮೌನಮುರಿದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದನದ ನಿಯಮಾವಳಿ ಪ್ರಕಾರವೇ ಕಲಾಪ ನಡೆಸುತ್ತೇನೆ. ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ ಎಂದು ಹೇಳಿದರು. ಆಡಳಿತ ಹಾಗೂ ವಿಪಕ್ಷದವರ ಎಲ್ಲಾ ಚರ್ಚೆಗೆ ಅವಕಾಶ ನೀಡಿದ್ದೇವೆ. ತನಿಖೆ ನಡೆಯುತ್ತಿರುವಾಗಲೇ ವಾಲ್ಮೀಕಿ ನಿಗಮ ಹಗರಣದ ಚರ್ಚೆ ನಡೆದಿದೆ. ಆ ಚರ್ಚೆಯಲ್ಲೇ ಸುಮಾರು ನಾಲ್ಕೈದು ದಿನ ಮುಗಿದು ಹೋಯಿತು. ಈಗ ಮುಡಾ ಪ್ರಕರಣದ ವಿಚಾರವಾಗಿ ಚರ್ಚೆಗೆ ಅವಕಾಶ ಕೇಳಿದ್ದಾರೆ. ಆದರೆ, ಇನ್ನೂ ಮಸೂದೆಗಳ ಮಂಡನೆ ಬಾಕಿ ಇವೆ. ಹೀಗೆಯೇ ಮುಂದುವರಿದರೆ ಕಷ್ಟವಾಗುತ್ತದೆ. ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯ ಮುಂದುವರಿಸಲ್ಲ. ನಿಯಮಗಳ ವಿರುದ್ಧ ನಾವು ನಡೆದುಕೊಳ್ಳಲ್ಲ ಎಂದು ಅವರು ಹೇಳಿದರು.ಆರೋಪ ಪ್ರತ್ಯಾರೋಪ ಸಹಜ. ಆದರೆ, ಅಜೆಂಡಾ ಪ್ರಕಾರ ಸದನ ನಡೆಯಲಿದೆ ಎಂದು ಅವರು ಹೇಳಿದರು. ಮುಡಾ ಕುರಿತ ಚರ್ಚೆಗೆ ಪಟ್ಟು ಹಿಡಿದಿರುವ ಬಿಜೆಪಿ, ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ಮಾಡಿ ಗಮನ ಸೆಳೆದಿದ್ದಾರೆ.
ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ: ಅಶ್ವತ್ಥ್ ನಾರಾಯಣ
ಮುಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಸರ್ಕಾರ ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ ಮುಂದುವರಿಯಲಿದೆ. ಸದನ ಮುಕ್ತಾಯವಾಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ವಿಧಾನಸೌಧದಲ್ಲಿ ಶಾಸಕ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.