ಬೆಂಗಳೂರು; ಬಿಜೆಪಿ ಶಾಸಕ, ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಅವರು ಕೇಸರಿ ಪಕ್ಷ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿದಾಗಿನಿಂದ ಅಸಮಾಧಾನಗೊಂಡಿರುವ ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್, ಬಿಜೆಪಿ ಜತೆಗಿನ ಮೈತ್ರಿಯನ್ನು ಅಂತಿಮಗೊಳಿಸುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಾಸಕ ಎಸ್‌ಟಿ ಸೋಮಶೇಖರ್, 20 ವರ್ಷದಿಂದ ನಾನು ಜೆಡಿಎಸ್ ಎದುರು ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂಗ್ರೆಸ್‌ನಲ್ಲಿರುವಾಗ ಜೆಡಿಎಸ್ ನನ್ನ ಎದುರಾಳಿ, ಅದೇ ರೀತಿ ಈಗ ಬಿಜೆಪಿಯಲ್ಲಿರುವಾಗಲೂ ಜೆಡಿಎಸ್ ನನ್ನ ಎದುರಾಳಿ.ನಮ್ಮ ಕಾರ್ಯಕರ್ತರು ಅವರಿಂದ ಕಿರುಕುಳ ಅನುಭವಿಸಿದ್ದಾರೆ.ಈಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮಾತನಾಡಿಸದೆ ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದಾರೆ. ನಾನು ಜೆಡಿಎಸ್- ಬಿಜೆಪಿ ಮೈತ್ರಿಗೆ ವಿರೋಧಿ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿಯೂ ಕೂಡ ಹಲವಾರು ಶಾಸಕರು ಮತ್ತು ನಾಯಕರು ಮೈತ್ರಿ ಪರವಾಗಿಲ್ಲ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲ. ಜೆಡಿಎಸ್‌ನಲ್ಲೂ ಅದೇ ಭಾವನೆ ಇದೆ ಎಂದು ಸೋಮಶೇಖರ್ ಹೇಳಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಅಧಿಕೃತವಾದ ಬಳಿಕ ನನ್ನ ಮುಂದಿನ ನಿರ್ಧಾರ ಮಾಡುತ್ತೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಆ ಸಂದರ್ಭದಲ್ಲಿ ಒಂದು ಪಕ್ಷದ ಮತದಾರರು ಮೈತ್ರಿ ಅಭ್ಯರ್ಥಿಗಳಿಗೆ ಪರಸ್ಪರ ಮತ ಹಾಕಲಿಲ್ಲ. ಆದರೆ ಯಾರೂ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಹಲವಾರು ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ. ನನ್ನ ಕ್ಷೇತ್ರವಷ್ಟೇ ಅಲ್ಲ. ರಾಜರಾಜೇಶ್ವರಿನಗರ, ಪದ್ಮನಾಭನಗರ, ದಾಸರಹಳ್ಳಿಯಲ್ಲಿ ಜನ ಪಕ್ಷ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.