ಗದಗ: ಉದ್ಯಮಿ, ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧಇದೀಗ ಮತ್ತೊಂದು ವಂಚನೆ ಆರೋಪ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂಜಯ್ ಚವಡಾಳ ಅವರು ಅಭಿನವ ಸ್ವಾಮೀಜಿ ವಿರುದ್ಧ ವಂಚನೆ ಆರೋಪ ಮಾಡಿ, ಸೆಪ್ಟಂಬರ್ 19 ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸಂಜಯ್ ಚವಡಾಳ ಅವರು ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ, ʼಅರುಂಧತಿ ಫೌಂಡೇಷನ್ʼ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಬಿಜೆಪಿ ವರಿಷ್ಠರೊಂದಿಗೆ ನಿಕಟ ಸಂಪರ್ಕದಲ್ಲಿರುವು ಬಿಂಬಿಸಿಕೊಂಡಿದ್ದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದರು.
ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವಂತೆ ಅವರಿಗೆ ಕೋರಿದ್ದರು. ಅದಕ್ಕಾಗಿ 50 ಲಕ್ಷ, 40 ಲಕ್ಷ ಮತ್ತು 10 ಲಕ್ಷದಂತೆ ವಿವಿಧ ಹಂತದಲ್ಲಿ 1 ಕೋಟಿ ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲ ತಿಳಿಸಿದ್ದಾರೆ.