ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿನ್ನೆ (ಮಂಗಳವಾರ) ರಾತ್ರಿ 11ರ ಸುಮಾರಿಗೆ ಗೋಪಾಲಯ್ಯ ಅವರಿಗೆ ಕರೆ ಮಾಡಿದ್ದ ಪದ್ಮರಾಜ್, ಹಣಕ್ಕೆ ಬೇಡಿಕೆ ಇಟ್ಟು ಅವಾಚ್ಯವಾಗಿ ನಿಂದಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಬಿಜೆಪಿ ಶಾಸಕ ಗೋಪಾಲಯ್ಯ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಗೋಪಾಲಯ್ಯ ಅವರು, ಇಂದು ಬೆಳಗ್ಗೆ ಸದನಕ್ಕೆ ತೆರಳಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಸ್ಪೀಕರ್ ಯುಟಿ ಖಾದರ್ ಅವರಿಗೆ ದೂರು ನೋಡುತ್ತೇನೆ. ಪದ್ಮರಾಜು ಬೆದರಿಕೆ ಹಾಕಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರಿಗೂ ದೂರು ನೀಡುತ್ತೇನೆ. ಪದ್ಮರಾಜುನನ್ನ ಗಡಿಪಾರು ಮಾಡುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.