ಬೆಂಗಳೂರು: ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ಬೆಲೆ ಶೇ.48 ಏರಿಕೆಯಾಗಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ ಸಿಎಂ ಸಿದ್ದರಾಮಯ್ಯ ಅವರು, ನೆರೆಯ ರಾಜ್ಯಗಳ ಹೋಲಿಸಿದರೆ ಬಿತ್ತನೆ ಬೀಜಗಳ ದರ ರಾಜ್ಯದಲ್ಲಿ ಕಡಿಮೆಯಿದೆ. ಕೃಷಿ ಸಚಿವರು, ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಈ ಮಧ್ಯೆ ಬಿತ್ತನೆ ಬೀಜನ ಬೆಲೆ ಏರಿಕೆಯು ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಹೆಸರು 805 ರೂ, ಉದ್ದು 660, ತೊಗರಿ 776, ಸೋಯಾಬಿನ್ 1,431 ರೂ. ಇದ್ದು, ಕಳೆದ ಬಾರಿಗಿಂತ ಈ ಬಾರಿ 20-30 ಶೇ. ದರ ಏರಿಕೆಯಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಪ್ರಮುಖವಾಗಿ ಮುಂಗಾರು ಸಮಯದಲ್ಲಿ ಹೆಸರು, ಉದ್ದು, ಶೇಂಗಾ, ತೊಗರಿ ಹಾಗೂ ಸೋಯಾಬಿನ್ ಬೆಳೆಯನ್ನು ಬೆಳೆಯುತ್ತಾರೆ. ಈ ಬಾರಿ ಸೋಯಾಬಿನ್ ಹೊರತುಪಡಿಸಿ ಬೇರೆಲ್ಲಾ ಬೆಳೆಯ ಬೀಜದ ದರ ಏರಿಕೆ ಕಂಡಿದೆ. ಇದರಿಂದ ರೈತರು ಕಂಗಾಲಾಗಿದ್ದು, ರೈತರ ಬೆನ್ನೆಲುಬು ಎನ್ನುವ ಸರ್ಕಾರ ಯಾಕಿಷ್ಟು ಬೆಲೆ ಏರಿಕೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ರಾಗಿ, ನೆಲಗಡಲೆ, ತೊಗರಿ ಹಾಗೂ ಮೆಕ್ಕೆಜೋಳವನ್ನ ಮಳೆಯಾಧಾರಿತ ಬೆಳೆಗಳಾಗಿ ರೈತರು ಬೆಳೆಯುತ್ತಾರೆ. ಇದೀಗ 5 ಕೆಜಿಯ ಬಿತ್ತನೆ ರಾಗಿಯ ಬೆಲೆ ರೈತರಿಗೆ 235 ರೂ. ಆಗಿದ್ದು, ಕಳೆದ ವರ್ಷಕ್ಕಿಂತ 45 ರೂ. ಹೆಚ್ಚಳವಾಗಿದೆ. 5 ಕೆಜಿಯ ತೊಗರಿ ಬ್ಯಾಗ್ 765 ರೂ. ಆಗಿದೆ. ನೆಲಗಡಲೆಯ 30 ಕೆಜಿ ಬ್ಯಾಗ್ 3,420 ರೂ. ಆಗಿದೆ. ಮೆಕ್ಕೆಜೋಳವೂ ಸಹ 996 ರೂ. ಆಗಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.