ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಬಿಬಿಎಂಪಿ ಚುನಾವಣೆಗೆ ಈ ಸಲ ಮುಹೂರ್ತ ಕೂಡಿ ಬರುವ ಮುನ್ಸೂಚನೆ ಸಿಕ್ಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಮಾತನಾಡಿದ್ದು, ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸೇರಿದಂತೆ ಬಿಬಿಎಂಪಿಗೂ ಚುನಾವಣೆ ನಡೆಸುವ ತಮ್ಮ ಸರ್ಕಾರದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬುಧವಾರ ನಗರ ಪ್ರದಕ್ಷಿಣೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಎಂ, ಬಿಬಿಎಂಪಿ ಚುನಾವಣೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಬಿಬಿಎಂಪಿಗೆ ಚುನಾವಣೆ ನಡೆದು ಎಷ್ಟು ವರ್ಷಗಳಾಯ್ತು? ಅಂತಾ ಪತ್ರಕರ್ತರನ್ನೇ ಕೇಳಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಗ್ಗೆ ಈ ಹಿಂದಿನ ಬಿಜೆಪಿ ಸರ್ಕಾರವನ್ನು ನೀವು ಯಾಕೆ ಪ್ರಶ್ನಿಸಲಿಲ್ಲ? ಎಂದರು. ಬಹಳ ದಿನಗಳಿಂದಲೂ ಚುನಾವಣೆ ನಡೆಸಲಾಗದೇ ನೆನೆಗುದಿಗೆ ಬಿದ್ದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮುಂಬರುವ ದಿನಗಳಲ್ಲಿ ಚುನಾವಣೆ ನಡೆಸುವುದಾಗಿ ಇದೇ ವೇಳೆ ಸಿಎಂ ಅವರು ಭರವಸೆ ನೀಡಿದರು. ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪೂರಕವಾದ ಫಲಿತಾಂಶವೇನಾದರೂ ಬಂದರೆ, ಅದೇ ಉತ್ಸಾಹದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರು ಚುನಾವಣೆಗೆ ನಿರ್ಧರಿಸಲಿದ್ದಾರೆಂದು ಹೇಳಲಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತಮ್ಮದು ನುಡಿದಂತೆ ನಡೆದ ಸರ್ಕಾರವೆಂದು ಬೀಗುತ್ತಿರುವ ಉಭಯ ನಾಯಕರು, ಲೋಕಸಭೆ ಚುನಾವಣೆಯಲ್ಲೂ ರಾಜ್ಯದ ಜನ ಹತ್ತಕ್ಕೂ ಅಧಿಕ ಕೈ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇಯಾದರೆ, ಅದೇ ಕಾವಿನಲ್ಲಿ ಬಿಬಿಎಂಪಿ ಚುನಾವಣೆ ಘೋಷಿಸಿ ಕಾಂಗ್ರೆಸ್ ಬೆಳೆ ಬೆಳೆದುಕೊಳ್ಳಲು ಚುನಾವಣೆ ಎಂಬ ಬಿತ್ತನೆ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದೇ ಹೇಳಲಾಗುತ್ತಿದೆ.