ಬಿರಿಯಾನಿ ಜೊತೆ ಹೆಚ್ಚು ಸಲಾಡ್ ಕೇಳಿದ್ದೇ ತಪ್ಪಾಯಿತು. ಯಾಕೆಂದರೆ ಇದರಿಂದ ಗ್ರಾಹಕನೊಬ್ಬ ಜೀವವನ್ನೇ ಕಳೆದುಕೊಳ್ಳಬೇಕಾಯಿತು.
ಹೈದರಾಬಾದ್ ನ ಪುಂಜಗುಟ್ಟ ಪ್ರದೇಶದ ಮೆರಿಡಿಯನ್ ರೆಸ್ಟೋರೆಂಟ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಲಿಯಾಕತ್ ಎಂಬಾತ ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗೆ ಬಂದಿದ್ದು, ಈ ವೇಳೆ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಈ ವೇಳೆ ಬಿರಿಯಾನಿ ತಿನ್ನುತ್ತಾ ಹೆಚ್ಚುವರಿಯಾಗಿ ಸಲಾಡ್ ನೀಡುವಂತೆ ಕೇಳಿದ್ದಾರೆ. ಈ ವಿಚಾರವಾಗಿ ಹೊಟೇಲ್ ಸಿಬ್ಬಂದಿ ಮತ್ತು ಅವರ ನಡುವೆ ವಾಗ್ವಾದ ನಡೆದಿದೆ. ಬಳಿಕ ಜಗಳ ದೊಡ್ಡದಾಗಿ ಹೊಟೇಲ್ ಸಿಬ್ಬಂದಿ ಮತ್ತು ಗ್ರಾಹಕರ ಗುಂಪಿನ ನಡುವೆ ಹೊಡೆದಾಟ ಪ್ರಾರಂಭವಾಗಿದೆ.
ಸಮಸ್ಯೆ ಬಗೆ ಹರಿಸಲು ಎರಡೂ ಗುಂಪಿನವರು ರಾತ್ರಿ ಪೊಲೀಸ್ ಠಾಣೆ ಸಮೀಪ ಬರುತ್ತಿದ್ದಂತೆ ಲಿಯಾಕತ್ ಗೆ ಎದೆನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಹೊಟೇಲ್ ಮ್ಯಾನೇಜರ್ ಸೇರಿ ಸಿಬ್ಬಂದಿ ಲಿಯಾಕತ್ ಗೆ ತೀವ್ರವಾಗಿ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ತಿಳಿಸಿದ್ದಾರೆ.
ತೀವ್ರವಾಗಿ ಹಲ್ಲೆಗೆ ಒಳಗಾದ ಪರಿಣಾಮ ಅವರಿಗೆ ಹೃದಯ ಸ್ಟಂಭನವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿನ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.