ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಸಿದ್ಧಾಂತದಲ್ಲಿ ರಾಜಕಾರಣ ಮಾಡಿದ ಅತ್ಯುನ್ನತ ನಾಯಕ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಹಿಂದುಳಿದ ವರ್ಗದ ನಾಯಕನಾಗಿ ಗುರುತಿಸಿಕೊಂಡಿದ್ದ ಕರ್ಪೂರಿ ಠಾಕೂರ್ ರವರು, ಜನ ನಾಯಕ ಎಂದೇ ಗುರುತಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಇದೀಗ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ.
ಇವರು ಡಿಸೆಂಬರ್ 1970 ಮತ್ತು ಜೂನ್ 1971 ರ ನಡುವೆ ಹಾಗೂ ಡಿಸೆಂಬರ್ 1977 -ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ರಾಜ್ಯಸಭಾ ಸಂಸದರಾಗಿದ್ದಾರೆ.
ಭಾರತದ ಸ್ವಾತಂತ್ರ್ಯ ಸಿಕ್ಕ ಬಳಿಕ ಬಿಹಾರ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ಪೂರಿ ಠಾಕೂರ್, 1952ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾದರು. ಸೋಶಿಯಲಿಸ್ಟ್ ಪಾರ್ಟಿಯ ಅಭ್ಯರ್ಥಿಯಾಗಿ ತಾಜ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಶಿಕ್ಷಣ ಸಚಿವರಾಗಿದ್ದ ವೇಳೆ ಬಿಹಾರ ಶಾಲೆಗಳಲ್ಲಿ ಇಂಗ್ಲೀಷ್ ಕಡ್ಡಾಯವನ್ನು ತೆಗೆದು ಹಾಕಿ ಆಯ್ಕೆಯಾಗಿ ಮಾಡಿ ಹೊಸ ಕ್ರಾಂತಿ ಸೃಷ್ಟಿಸಿದ್ದರು.