ಬೆಂಗಳೂರು : ಬೆಂಗಳೂರಿನಲ್ಲಿ ಇನ್ಮುಂದೆ ಬೆಳಗಿನ ಜಾವ 5ರಿಂದ ರಾತ್ರಿ 10 ಗಂಟವರೆಗೂ ನೀವು ಪಾರ್ಕ್‌ಗಳಲ್ಲಿ ವಾಕಿಂಗ್ ಮಾಡಬಹುದು. ಸಮಯ ಕಳೆಯಬಹುದು. ಹೌದು, ಇಂದಿನಿಂದ ನಗರದ ಎಲ್ಲಾ ಪಾರ್ಕ್‌ಗಳ ಸಮಯ ವಿಸ್ತರಣೆಗೊಂಡಿದೆ. ಈ ವಿಚಾರವನ್ನು ಡಿಸಿಎಂ ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ, ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಅರಣ್ಯ ಇಲಾಖೆ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದ್ದು, ಈ ವೇಳೆ ಪಾರ್ಕ್‌ಗಳ ಸಮಯ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ಮಾಹಿತಿ ನೀಡಿದರು. ಈ ಮೊದಲು ಬೆಳಿಗ್ಗೆ 5ರಿಂದ 10 ರ ವರೆಗೂ ಹಾಗೂ ಮದ್ಯಾಹ್ನ 1:30 ರಿಂದ 8ರ ವರೆಗೂ ನಿಗದಿತ ಸಮಯದಲ್ಲಿ ಮಾತ್ರ ತೆರೆದಿರುತ್ತಿದ್ದವು. ಆದರೆ ಈಗ ಮುಂಜಾನೆ 5ರಿಂದ ರಾತ್ರಿ 10ರ ವರೆಗೂ ಸಂಪೂರ್ಣ ಲಭ್ಯವಿರುತ್ತದೆ. ಜೊತೆಗೆ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದಾಗಿ, ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡುವುದಾಗಿ ತಿಳಿಸಿದರು. ಪಾರ್ಕ್ ಗಳ ಸಮಯ ವಿಸ್ತರಣೆ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ತೋಟಗಾರಿಕೆ ವ್ಯಾಪ್ತಿಯಲ್ಲಿ ಇರುವ ಪಾರ್ಕ್‌ಗಳಿಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.