ಬೆಂಗಳೂರು: ʻಭಾರತ ಚಂದ್ರನ ಮೇಲಿದೆ. ದೇಶದ ಘನತೆಯನ್ನು ಉತ್ತುಂಗಕ್ಕೇರಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜೊಹಾನ್ಸ್ಬರ್ಗ್ನಿಂದ ನೇರವಾಗಿ ಶನಿವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಚಂದ್ರಯಾನ- 3 ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಬರಮಾಡಿಕೊಂಡರು. ಸೋಮನಾಥ್ ಅವರನ್ನು ಕಂಡಕೂಡಲೇ ಮೋದಿ, ಅವರನ್ನು ತಬ್ಬಿಕೊಂಡು ಶಹಬ್ಬಾಸ್ ಎಂದರು.
ಚಂದ್ರಯಾನ-3 ಯಶೋಗಾಥೆಯ ಬಗ್ಗೆ ಸೋಮನಾಥ್, ಪ್ರಧಾನಿಯವರಿಗೆ ಪೂರ್ಣ ಮಾಹಿತಿ ನೀಡಿದರು. ವಿಕ್ರಮ್ ಲ್ಯಾಂಡರ್ನ ಕಾರ್ಯವೈಖರಿ ಬಗ್ಗೆ ವಿವರಿಸಿದರು.
ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ ಅವರ ಜೊತೆ ಫೋಟೋ ತೆಗೆಸಿಕೊಂಡರು.
ಬಳಿಕ ಮಾತನಾಡಿದ ಅವರು, ನಿಮ್ಮ ಧೈರ್ಯ, ಶಕ್ತಿ, ಶ್ರಮ, ಸಾಮರ್ಥ್ಯಕ್ಕೆ ನನ್ನ ನಮನಗಳು ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ ಎಂದು ಹೇಳಿದರು.