ಬೆಂಗಳೂರು: ಇನ್ಮುಂದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಯುವವರು BWSSB ವತಿಯಿಂದ ಅನುಮತಿ ಪಡೆಯಲೇಬೇಕು. ಒಂದು ವೇಳೆ ಅನುಮತಿ ಪಡೆಯದೇ ಬೋರ್‌ವೆಲ್ ಕೊರೆದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗೂ ನೀರಿನ ಬವಣೆ ನೀಗಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೆಚ್ಚು ಬೇಸಿಗೆ ಕಾರಣದಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಬೇಕಾಬಿಟ್ಟಿ ಬೋರ್‌ವೆಲ್ ಕೊರೆಯುವವರಿಗೆ ಜಲಮಂಡಳಿ ಎಚ್ಚರಿಕೆ ನೀಡಿದೆ. ಅಂತರ್ಜಲವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಂಡಳಿ ಈ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿರುವುದಾಗಿ ತಿಳಿಸಿದೆ.
ಹಾಗೂ ಕರ್ನಾಟಕ ಅಂತರ್ಜಲ ಅಧಿನಿಯಮ 2011ರ ಕಂಡಿಕೆ 11ರ ಅನ್ವಯ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕೊಳವೆ ಬಾವಿಗಳನ್ನು ಕೊರೆದಲ್ಲಿ ಮಾಲೀಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ.ವಿ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಇನ್ನು ಮಾರ್ಚ್ 15ರಿಂದ ಈ ನಿಯಮ ಜಾರಿಗೆ ಬರಲಿದೆ. ಬೆಂಗಳೂರು ಜಲಮಂಡಳಿ ಜಾಲತಾಣದಲ್ಲಿ ಕೊಳವೆ ಬಾವಿ ಕೊರಿಸಲು ಅನುಮತಿ ಪಡೆಯಲು ಅರ್ಜಿ ಲಭ್ಯವಿರುತ್ತದೆ. ಸಾರ್ವಜನಿಕರಿಗೆ ಕೊಳವೆಬಾವಿ ಕೊರೆಸಲು ಮೊದಲ ಆದ್ಯತೆ ಹಾಗೂ ಖಾಸಗಿ ಬೋರ್‌ವೆಲ್‌ಗಳಿಗೆ ಅಂತರ್ಜಲ ಮಟ್ಟ, ತಜ್ಞರ ಸೂಚನೆ ಹಾಗೂ ಅವಶ್ಯಕತೆ ಮೇರೆಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.