ಹೊಸದಿಲ್ಲಿ: ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಇಂಡಿಗೋ ಏರ್‌ಲೈನ್ಸ್, ಮತ್ತೊಂದು ವಿವಾದದಲ್ಲಿ ಸಿಲುಕಿದೆ. ‘ಐಷಾರಾಮಿ ಸಾರಿಗೆ’ ಎಂದೇ ಕರೆಯಲಾಗುವ ವಿಮಾನದಲ್ಲಿ ಸೀಟುಗಳೇ ಇಲ್ಲದಿರುವುದು ನಗೆಪಾಟಲಿಗೀಡಾಗಿದೆ.
ಬೆಂಗಳೂರಿನಿಂದ ಭೋಪಾಲ್‌ಗೆ ಪ್ರಯಾಣಿಸಿದ್ದ ಮಹಿಳೆಯೊಬ್ಬರು, ಸೀಟಿನಲ್ಲಿ ಕುಷನ್ ಇಲ್ಲದಿರುವ ಚಿತ್ರವನ್ನು ‘ಎಕ್ಸ್’ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಯವನಿಕಾ ರಾಜ್ ಶಾ ಎಂಬ ಮಹಿಳೆ, “ನಾನು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತೇನೆ ಎಂದು ಆಶಿಸುತ್ತೇನೆ” ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
“ಇದು ಬೆಂಗಳೂರಿನಿಂದ ಭೋಪಾಲ್‌ಗೆ ಹೋಗುವ 6ಇ 6465 ಸಂಖ್ಯೆಯ ನಿಮ್ಮ ವಿಮಾನ” ಎಂದು ಇಂಡಿಗೋವನ್ನು ಟ್ಯಾಗ್ ಮಾಡಿದ್ದಾರೆ. ಅವರು ‘ಬ್ಯೂಟಿಫುಲ್ ಇಂಡಿಗೋ’ ಎಂದು ಕರೆಯುವ ಮೂಲಕ ವಿಮಾನಯಾನ ಸಂಸ್ಥೆಯನ್ನು ಅಣಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ, ಕುಷನ್‌ಗಳನ್ನು ಸ್ವಚ್ಛತೆಗಾಗಿ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಲ್ಲಿ ಕೂರುವ ಪ್ರಯಾಣಿಕರಿಗೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಮಾಹಿತಿ ನೀಡಿದ್ದರು ಎಂದು ಹೇಳಿದೆ.