ನವದೆಹಲಿ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಕರ್ನಾಟಕ ಸರಕಾರಕ್ಕೆ ಕೇಂದ್ರ ಸರಕಾರ ಸೂಚಿಸಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಕುರಿತು ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಸಭೆಯ ವಿವರಗಳನ್ನು ಹಂಚಿಕೊಂಡ ಶಿವಕುಮಾರ್, ಬೆಂಗಳೂರಿನಲ್ಲಿ ಟ್ರಾಫಿಕ್ ಸರಾಗಗೊಳಿಸುವ ಮಾರ್ಗಗಳನ್ನು ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ಈ ಸಮಸ್ಯೆಗೆ ಕೇಂದ್ರ ಸರ್ಕಾರ ಹೇಗೆ ಬೆಂಬಲ ನೀಡಬಹುದು ಎಂಬುದನ್ನು ಹೇಳಿದ್ದು, ಗಡ್ಕರಿ ಅವರು ಸಕಾರಾತ್ಮಕ ರೀತಿಯಲ್ಲಿ ಕೆಲವು ಸಲಹೆ ನೀಡಿದ್ದಾರೆ. ಡಿಪಿಆರ್ ತಯಾರಿಸಲು ನಮಗೆ ಸೂಚಿಸಿದ್ದಾರೆ ಎಂದರು. ಸುರಂಗ ಅಥವಾ ಮೇಲ್ಸೇತುವೆ ಅಥವಾ ಟ್ರಾಫಿಕ್ ಸರಾಗಗೊಳಿಸುವ ಯಾವುದೇ ಮಾರ್ಗಗಳ ನಿರ್ಮಾಣದ ಪ್ರಸ್ತಾವನೆಯೊಂದಿಗೆ ರಾಜ್ಯ ಸರ್ಕಾರ ಈಗಾಗಲೇ ಆಸಕ್ತರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಎಲ್ಲಾ ಪ್ರಸ್ತಾವನೆಗಳನ್ನು ಸ್ವೀಕರಿಸಿದ ನಂತರ ಕೇಂದ್ರ ಸರ್ಕಾರದೊಂದಿಗೆ ಮಾತನಾಡುತ್ತೇವೆ, ಅದು ಬೆಂಬಲಿಸಲು ಸಿದ್ಧವಾಗಿದೆ ಎಂದು ತಿಳಿಸಿದರು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇಸ್ರೇಲ್‌ನ ಒಂದು ಸೇರಿದಂತೆ ಸುಮಾರು 10 ಕಂಪನಿಗಳು ಪ್ರಸ್ತುತಿಗಳನ್ನು ನೀಡಿದ್ದು, ಬಿಡ್‌ಗಳಲ್ಲಿ ಭಾಗವಹಿಸಲು ಅವರನ್ನು ಕೇಳಲಾಗಿದೆ. ಆಸಕ್ತರು ಅಭಿಪ್ರಾಯ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ. ಅವರೆಲ್ಲರೂ ಅಂತರರಾಷ್ಟ್ರೀಯ ವಿನ್ಯಾಸ ಮತ್ತು ಪರಿಕಲ್ಪನೆಯೊಂದಿಗೆ ಭಾಗವಹಿಸಲಿ, ಬೆಂಗಳೂರು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಾವು ಇದನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.