ಬೆಂಗಳೂರು: ನಗರದ ಸುಲ್ತಾನ್ ಪಾಳ್ಯದ ಅಪಾರ್ಟ್‌ಮೆಂಟ್ ವೊಂದರಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್‌ಗೆ ನಾಲ್ಕು ವರ್ಷದ ಗಂಡು ಮಗು ಬಲಿಯಾಗಿದೆ. ನಾಲ್ಕೂವರೆ ವರ್ಷದ ಅನುಪ್ ಸಾವನ್ನಪ್ಪಿದ ಮಗು. ಸುಲ್ತಾನ್ ಪಾಳ್ಯ ಬಳಿಯಿರುವ ರಿಯಾನ್ ವುಡ್ ಅಪಾರ್ಟ್‌ಮೆಂಟ್ ನಾಲ್ಕನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ನೇಪಾಳ ಮೂಲದ ಪೂರಾನ್ ಖಂಡಕ್ ಹಾಗೂ ಈತನ ಪತ್ನಿ ಲಕ್ಷ್ಮೀ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಕೃತ್ಯ ನಡೆದ ಅಪಾರ್ಟ್ ಮೆಂಟ್‌ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ ತಾಯಿಯು ಸಹ ಅಪಾರ್ಟ್ ಮೆಂಟ್ ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿ ವಾಸ್ತವ್ಯಕ್ಕಾಗಿ ನೆಲಮಹಡಿಯಲ್ಲಿ ಮನೆ ನೀಡಲಾಗಿತ್ತು. ಅಲ್ಲದೆ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯ ಮನೆ ಸಹ ನೀಡಲಾಗಿತ್ತು. ಗಂಡ-ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ-ಪಾಲನೆ ಕಷ್ಟವಾಗಿತ್ತು. ಆದ್ಯಾಗೂ ಪ್ರತಿದಿನ ಪ್ರತಿದಿನ ಮಧ್ಯಾಹ್ನ ಮಗುವನ್ನ ಮಲಗಿಸಿ ಡೋರ್ ಲಾಕ್ ಹಾಕಿ ದಂಪತಿ ತಮ್ಮ ಹೊರಗಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಿನ್ನೆಯೂ ಸಹ ಮಗು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿದೆ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗು ಮಲಗಿರುವಾಗ ನಿನ್ನೆ ಸಂಜೆ ವೇಳೆ ಕಾಣಿಸಿಕೊಂಡ ಎಲೆಕ್ಟ್ರಿಕಲ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮಗು ಕರಕಲಾಗಿತ್ತು. ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನ ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.