ಬೆಂಗಳೂರು: ಒಳ ಉಡುಪಿನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಏರ್ ಪೋರ್ಟಿನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ. ದುಬೈನಿಂದ ಕೆಂಪೇಗೌಡ ಏರ್ ಪೋರ್ಟ್‍ಗೆ ಆಗಮಿಸಿದ್ದ ಪ್ರಯಾಣಿಕನನ್ನು ಪತಪಾಸಣೆ ಮಾಡಿದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಆಕೆಯನ್ನು ತೀವ್ರ ತಪಾಸಣೆ ನಡೆಸಿದಾಗ ಪೇಸ್ಟ್ ರೂಪದಲ್ಲಿ ಚಿನ್ನವನ್ನ ಸೊಂಟದ ನಡುವೆ ಮರೆಮಾಚಿ ಸಾಗಾಟಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು 55 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.