ಬೆಂಗಳೂರು: ಈವೆಂಟ್ ಮ್ಯಾನೇಜ್‌ಮೆಂಟ್ ಉದ್ಯಮದ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಪಟ್ಟೆಗಾರಪಾಳ್ಯದ ನಿವಾಸಿಗಳಾಗಿರುವ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿಯಾಗಿದ್ದಾರೆ. ರಾಕೇಶ್ ಹಾಗೂ ಪೂಜಾ ಎಂಬ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ ಆರೋಪಿಗಳು ಬಡ ಹೆಣ್ಣು ಮಕ್ಕಳನ್ನ ಗುರಿಯಾಗಿಸಿಕೊಂಡು ಉದ್ಯೋಗದ ಭರವಸೆ ನೀಡುತ್ತಿದ್ದರು. ಬಳಿಕ ಅವರುಗಳನ್ನು ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದ ಸೋಗಿನಲ್ಲಿ ವಾರಕ್ಕೊಮ್ಮೆ ತಮಿಳುನಾಡು, ಪಾಂಡಿಚೇರಿ ರೆಸಾರ್ಟ್ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳುತ್ತಿದ್ದರು. ಅನ್ಯ ರಾಜ್ಯದ ಶ್ರೀಮಂತ ಉದ್ಯಮಿಗಳು, ರೆಸಾರ್ಟ್ಗಳಿಗೆ ಭೇಟಿ ನೀಡುತ್ತಿದ್ದವರಿಗೆ 25 ಸಾವಿರದಿಂದ 50 ಸಾವಿರದವರೆಗೂ ಹಣ ಪಡೆದು ದಂಧೆ ನಡೆಸುತ್ತಿದ್ದ ಆರೋಪಿಗಳು, ಮದ್ಯವನ್ನೂ ಸಹ ಪೂರೈಸುತ್ತಿದ್ದರು. ಬೆಂಗಳೂರಿನಿಂದ ಅಕ್ರಮವಾಗಿ ಯುವತಿಯರನ್ನ ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿದ್ದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿತರ ವಶದಲ್ಲಿದ್ದ ನಾಲ್ವರು ಯುವತಿಯರನ್ನ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
