ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ

ಬೆಂಗಳೂರು: ಬೆಂಗಳೂರು ಕಂಬಳ- ನಮ್ಮ ಕಂಬಳಕ್ಕೆ ಅದ್ಧೂರಿ ತೆರೆ ಬಿದ್ದಿದ್ದು, ಎರಡು ದಿನಗಳಲ್ಲಿ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಜನ ಆಗಮಿಸಿ ಕರಾವಳಿಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಕಂಬಳವನ್ನು ಪ್ರತಿ ವರ್ಷ ರಾಜಧಾನಿಯಲ್ಲಿ ನಡೆಸುವ ಹಾಗೂ ಮುಂದೆ ಮುಂಬೈನಲ್ಲೂ ಆಯೋಜಿಸುವ ಆಶಯ ವ್ಯಕ್ತವಾಗಿದೆ.

ಬೆಂಗಳೂರು ಕಂಬಳ ಸಮಿತಿ ಇದೇ ಮೊದಲ ಬಾರಿ ರಾಜಧಾನಿಯಲ್ಲಿ ಏರ್ಪಡಿಸಿದ್ದ ಕಂಬಳ ಕ್ರೀಡಾಕೂಟ ನಿರೀಕ್ಷೆಗೂ ಮೀರಿ ಜನ ಮೆಚ್ಚುಗೆಗೆ ಪಾತ್ರವಾಯಿತು. ಹೀಗಾಗಿ ಈ ದೇಸಿ ಕ್ರೀಡೆಯನ್ನು ಮತ್ತಷ್ಟು ಪ್ರಚುರಪಡಿಸಲು ಚಿಂತನೆ ನಡೆದಿದೆ. ಹಾಗೆಯೇ ಪ್ರೀಮಿಯರ್ ಲೀಗ್‌ ಮಾದರಿಯಲ್ಲಿ ಕಂಬಳದ ಲೀಗ್ ನಡೆಸುವ ಬಗ್ಗೆಯೂ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಂಬಳದ ಎರಡನೇ ದಿನವಾದ ಭಾನುವಾರ ಜನ ಕಿಕ್ಕಿರಿದು ನೆರೆದಿದ್ದರು. ಇಡೀ ಅರಮನೆ ಮೈದಾನದ ತುಂಬ ಜನಜಾತ್ರೆ ಸೇರಿತ್ತು. ಕಂಬಳ ಕೋಣಗಳನ್ನು ವೀಕ್ಷಿಸಲು ನೂಕುನುಗ್ಗಲು ಉಂಟಾಗಿತ್ತು. ಶನಿವಾರಕ್ಕಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಕಂಬಳ ಕೋಣಗಳ ಓಟ ವೀಕ್ಷಿಸಿದರು. ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಿದ್ದ ಎಲ್‌ಇಡಿ ಸ್ಕ್ರೀನ್‌ ಬಳಿಯೂ ಜನಜಂಗುಳಿ ಇತ್ತು. ವಾರಾಂತ್ಯಕ್ಕೆ ಟ್ರೆಕ್ಕಿಂಗ್‌, ಕ್ಲಬ್‌, ಪಬ್ಬುಗಳತ್ತ ಹೋಗುತ್ತಿದ್ದ ಐಟಿ ಮಂದಿ ಕೂಡ ಕಂಬಳದತ್ತ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Advertisement

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರದಲ್ಲಿ ಓಡಿದ್ದ ಕೋಣಗಳು ಬೆಂಗಳೂರು ಕಂಬಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿವೆ. ನಮ್ಮ ಕಂಬಳ-ಬೆಂಗಳೂರು ಕಂಬಳದ ಕೆನೆಹಲಗೆ ಹಿರಿಯ ವಿಭಾಗದಲ್ಲಿ ಈ ಕೋಣಗಳು ಪಾಲ್ಗೊಂಡಿದ್ದವು. ಬೊಳಂಬಳ್ಳಿ ಪರಮೇಶ್ವರ್ ಭಟ್ಟ ಅವರ ಅಪ್ಪು-ಕುಟ್ಟಿ ಕೋಣಗಳು 6.5 ಅಡಿ ನೀರು ಚಿಮ್ಮಿಸಿ ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿವೆ.

ಸಿಲಿಕಾನ್ ಸಿಟಿಯಲ್ಲಿ ಕಂಬಳದ ಕಂಪು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು, ಕಂಬಳ ಜನಪದ ಕ್ರೀಡೆ ರಾಷ್ಟ್ರೀಯ ಮಟ್ಟದ‌ ಕ್ರೀಡೆಯಾಗಿ ಬೆಳೆಸುವ ಉದ್ದೇಶದಿಂದ ಕರಾವಳಿ ಭಾಗದಿಂದ ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಮುಂದೆ ರಾಜ್ಯದ ನಾನಾ ಭಾಗದಲ್ಲೂ ಕಂಬಳ ಆಯೋಜನೆ ಮಾಡೋ ಉದ್ದೇಶ ಕರಾವಳಿ ಬಾಗದ ಜನರಲ್ಲಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement