ಬೆಳಗಾವಿ: ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ ಶೇಷ ಅವರಿಗೆ ಅನಾಮೇಧೆಯಿಂದ ಬೆದರಿಕೆ ಕರೆ ಬಂದಿದ್ದು ಜೈಲು ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ಕಾರಾಗೃಹ, ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಸ್ಫೋಟಿಸಲಾಗುವುದು. ಅಲ್ಲದೇ ತಾವು ವಾಸಿಸುವ ವಸತಿ ಗೃಹದ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಬೆದರಿಕೆ ಕರೆ ಮಾಡಿ ಹಿಂಡಲಗಾ ಜೈಲಿನಲ್ಲಿ ಗಲಭೆ ಸೃಷ್ಟಿಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹಿಂಡಲಗಾ ಜೈಲಿನ ಹೆಡ್ ವಾಡರ್ಗಳಾದ ಜಗದೀಶ್ ಗಸ್ತಿ, ಎಸ್.ಎಂ ಗೋಟೆ ಪರಿಚಯಸ್ಥನೆಂದು ಹೇಳಿದ್ದಾನೆ. ಅಲ್ಲದೇ ಫೋನ್ ಕರೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಹೆಸರೂ ಉಲ್ಲೇಖ ಮಾಡಿ ತಾನು ಜೈಲಿನಲ್ಲಿದ್ದಾಗ ಬನ್ನಂಜೆ ರಾಜಾಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇನ್ನು ಈ ಅನಾಮಧೇಯ ವ್ಯಕ್ತಿಯಿಂದ ಕಾರಾಗೃಹ ಆಡಳಿತಕ್ಕೆ ಧಕ್ಕೆ ಅಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನಾಮಧೇಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಬಂಧಿಖಾನೆ ಇಲಾಖೆಯ ಡಿಐಜಿಪಿ ಟಿಪಿ ಶೇಷ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.