ಬೆಂಗಳೂರು: ಥರ್ಡ್ ವೇವ್ ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಭೀಮಾ ಸಿನಿಮಾ ವೀಕ್ಷಣೆಗೆ ಹೋಗಿದ್ದ ಯುವತಿಯೊಬ್ಬಳು ಶೌಚಾಲಯಕ್ಕೆ ಹೋದಾಗ ಆಕೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಅಪ್ರಾಪ್ತರನ್ನು ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಿರಿನಗರ ನಿವಾಸಿ 23 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಜಯನಗರ ಮೊದಲ ಹಂತದ ನಿವಾಸಿಗಳಾಗ 14 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರ ಹೇಳಿಕೆ ದಾಖಲಿಸಿಕೊಂಡು ಬಾಲ ನ್ಯಾಯಮಂಡಳಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಆ.10ರಂದು ಸಂತ್ರಸ್ತೆ ಭೀಮಾ ಸಿನಿಮಾ ವೀಕ್ಷಣೆಗೆ ಠಾಣೆ ವ್ಯಾಪ್ತಿಯ ಉರ್ವಶಿ ಚಿತ್ರಮಂದಿರಕ್ಕೆ ಹೋಗಿದ್ದಾರೆ. ಇಂಟರ್‌ವಲ್ ಸಮಯದಲ್ಲಿ ಶೌಚಾಲಯಕ್ಕೆ ತೆರಳಿದ್ದಾರೆ. ಅದೇ ಸಮಯಕ್ಕೆ ಆರೋಪಿಗಳು ಶೌಚಾಲಯದ ಕಿಟಕಿ ಬಳಿ ಮೊಬೈಲ್ ಇಟ್ಟು, ಸಂತ್ರಸ್ತೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಕೈಯ ನೆರಳು ಕಂಡು ಗಾಬರಿಕೊಂಡ ಸಂತ್ರಸ್ತೆ ಕಿಟಕಿ ಬಳಿ ಇಣುಕಿ ನೋಡಿದಾಗ ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಕೂಡಲೇ ಹೊರಗಡೆ ಬಂದು ನೋಡಿದಾಗ ಯಾರು ಇರಲಿಲ್ಲ. ಈ ಸಂಬಂಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.