ಬೆಂಗಳೂರು: ಕಳೆದ ಬಾರಿಗೆ ಹೋಲಿಸಿದರೆ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಈ ಬಾರಿ ಆಶಾದಾಯಕವಾಗಿದ್ದು, ಪ್ರಸಕ್ತ ಸಾಲಿನ ನಿಗದಿತ ಗುರಿಯ ಪೈಕಿ ಶೇ.64.50 ರಷ್ಟು ತೆರಿಗೆ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಪ್ರಸಕ್ತ ವರ್ಷದ ಬಿಬಿಎಂಪಿ ತೆರಿಗೆ ಸಂಗ್ರಹದ ನಿಗದಿತ ಗುರಿ ತಲುಪಲು ಇನ್ನು 1619 ಕೋಟಿಯಷ್ಟು ತೆರಿಗೆ ಸಂಗ್ರಹಿಸಬೇಕು ಎಂದಿದ್ದಾರೆ. 2022-23 ರ ಅವಧಿಯಲ್ಲಿ ಬಿಬಿಎಂಪಿ 2890 ಕೋಟಿ ತೆರಿಗೆ ಸಂಗ್ರಹಿಸಲಾಗಿತ್ತು. ಆದರೆ, ಈ ವರ್ಷ ಕಳೆದ ಬಾರಿಗಿಂತಲೂ 372 ಕೋಟಿ ಅಧಿಕ ತೆರಿಗೆ ಸಂಗ್ರಹಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಆಸ್ತಿಗಳ ಮಾಲೀಕರು ಆನ್ ಲೈನ್ ಮೂಲಕವೂ ಸುಲಭ ಮತ್ತು ತ್ವರಿತವಾಗಿ ತೆರಿಗೆ ಪಾವತಿಸಬಹುದಾಗಿದೆ. ತೆರಿಗೆ ಪಾವತಿಸದ ಆಸ್ತಿಗಳ ಮಾಲೀಕರ ಮೊಬೈಲ್‌ಗಳಿಗೆ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತೆ. ಈ ತಿಂಗಳ 30 ರೊಳಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಮಾಲೀಕರು ತೆರಗೆ ಪಾವತಿಸಬೇಕು. ತಪ್ಪಿದಲ್ಲಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರು ಎಚ್ಚರಿಸಿದ್ದಾರೆ.