ಬೆಂಗಳೂರು: ಮಹಿಳಾ ಪ್ರಾಧ್ಯಾಪಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಲಕ್ ನಗರ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಪಿ.ಯು ಕಾಲೇಜಿನಲ್ಲಿ ನಡೆದಿದೆ. ಇಂಗ್ಲೀಷ್ ಪ್ರಾಧ್ಯಾಪಕಿಯಾಗಿರುವ ಶಬಾನ (44) ಎಂಬುವರು ಕ್ಲಾಸ್ ರೂಮ್‌ನಲ್ಲಿಯೇ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಇಂದು ಕಾಲೇಜಿಗೆ ಬಂದಿದ್ದ ಶಬಾನ ಬೆಳಿಗ್ಗೆ ಪ್ರಾಂಶುಪಾಲರ ಕೊಠಡಿಗೆ ತೆರಳಿ ಮಾತನಾಡಿ ಹೊರಬಂದಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಶಬಾನ ಅವರನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಿಲಕ್ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ್ಮಹತ್ಯೆಗೆ ಯತ್ನಿಸಿರುವ ಶಬಾನ ಅವರ ಹೇಳಿಕೆನಪಡೆದುಕೊಳ್ಳಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
