ಬೆಂಗಳೂರು: ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಹಾಕಿ 16 ಕೋಟಿ ವಂಚನೆ

ಬೆಂಗಳೂರು: ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ 16 ಕೋಟಿ ರೂಪಾಯಿ ವಂಚಿಸಿದ್ದ ಆರೋಪದಡಿ ಶಾಂತಿನಗರದ ಬಿಎಂಟಿಸಿ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಎಂಟಿಸಿಯ ಅಂದಿನ ಸಂಚಾರ ಮುಖ್ಯ ವ್ಯವಸ್ಥಾಪಕರಾಗಿದ್ದ ಶ್ರೀರಾಮ್ ಮುಲ್ಕವಾನ್ ಎಂಬಾತನನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿತ ಅಧಿಕಾರಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಎಚ್ ತಿಳಿಸಿದ್ದಾರೆ. 2020ರಿಂದ 2023ರ ವರೆಗೆ ನಡೆದ ಅವ್ಯವಹಾರ ಇದಾಗಿದೆ. ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಅಧಿಕಾರಿಗಳು ಬಿಎಂಟಿಸಿ ಭದ್ರತೆ ಹಾಗೂ ಜಾಗೃತದಳ ನಿರ್ದೇಶಕ ಅರುಣ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶಿಖಾ ಅವರ ಹೆಸರಿನಲ್ಲಿ ಸಹಿವಿರುವ ಕಡತವನ್ನ ಕಲರ್ ಜೆರಾಕ್ಸ್ ಮಾಡಿ ಅದರಲ್ಲಿ ನಕಲಿ ಸಹಿ ಮಾಡಿ ಸುಮಾರು 16 ಕೋಟಿವರೆಗೂ ವಂಚಿಸಿರುವುದಾಗಿ ಆಪಾದಿಸಿ ಬಿಎಂಟಿಸಿಯ ವಿಚಕ್ಷಣಾ ದಳ‌ ಅಧಿಕಾರಿಗಳು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನ ಮಾಡಬಹುದು ಎಂದು ಹೇಳಿ ಷರಾ ಬರೆದು ನಕಲಿ ಸಹಿ‌ ಮಾಡಿ 21 ಲಕ್ಷ ವಂಚಿಸಿದ್ದರು. ಅಲ್ಲದೆ ಬಿಎಂಟಿಸಿ ಹಿರಿಯ ಅಧಿಕಾರಿಗಳು ಕಡತಗಳಿಗೆ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ಸಂಸ್ಥೆಗೆ 16 ಕೋಟಿವರೆಗೂ ವಂಚಿಸಿದ್ದರು. ಅವ್ಯವಹಾರ ಎಸಗಿರುವುದು ಗೊತ್ತಾಗುತ್ತಿದ್ದಂತೆ ಬಿಎಂಟಿಸಿ ಅಧಿಕಾರಿಗಳು ದೂರು ನೀಡಿದ ಮೇರೆಗೆ ಆರೋಪಿಯನ್ನ ಬಂಧಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಇನ್ನು ಆರು ಮಂದಿ ಭಾಗಿಯಾಗಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement