ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿತ್ತು ಎನ್ನಲಾದ ರೇವ್‌ಪಾರ್ಟಿ ಮೇಲೆ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಪತ್ತೆಯಾಗಿದೆ ಹಾಗೂ ಕೆಲ ತೆಲುಗು ನಟಿಯರು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇನ್ನು ಒಂದು ಬೆಂಜ್ ಕಾರಿನಲ್ಲಿ ಆಂಧ್ರ ಪ್ರದೇಶದ ಶಾಸಕ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿನ ಪಾಸ್ ಪತ್ತೆಯಾಗಿದೆ.
ಕಾನ್‌ಕಾರ್ಡ್ ಮಾಲೀಕ ಗೋಪಾಲರೆಡ್ಡಿ ಎಂಬುವವರ ಮಾಲಿಕತ್ವದ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಬರ್ತಡೇ ಪಾರ್ಟಿ ಹೆಸರಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿ ತಡರಾತ್ರಿ 2 ಗಂಟೆಯಾದ್ರೂ ಮುಗಿದಿರಲಿಲ್ಲ. ಅವಧಿ ಮೀರಿ ಪಾರ್ಟಿ ಮಾಡಲಾಗುತ್ತಿತ್ತು. ಹೀಗಾಗಿ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದು ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ.
ದಾಳಿ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಮತ್ತು 25ಕ್ಕೂ ಹೆಚ್ಚು ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದು ತಿಳಿದುಬಂದಿದೆ. ಇವರು ಆಹ್ವಾನಿತರಾಗಿ ಪಾರ್ಟಿಯಲ್ಲಿ ಭಾಗವಹಿಸಲು ಬಂದರೇ ಅಥವಾ ದುಡ್ಡು ನೀಡಿ ಕರೆಸಲಾಯಿತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇವರಲ್ಲಿ ಹಲವರು ತೆಲುಗು ನಟಿಯರು ಇದ್ದರು ಎಂಬುದು ಗೊತ್ತಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ಎಲ್ಲರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.