ಬೆಳಗಾವಿ: ರಾಜ್ಯ ಸರಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ರಾಜ್ಯ ಸರಕಾರ ಬಂದು 6 ತಿಂಗಳು ಕಳೆದಿದೆ. ಭೀಕರ ಬರಗಾಲ ಇದ್ದರೂ ಕಾಂಗ್ರೆಸ್ ಸರಕಾರವು ಜನರ ನಿರೀಕ್ಷೆ ಹುಸಿಯಾಗಿದೆ. 14 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಪ್ರಕಟಿಸಿದ ಸಿಎಂ ಅವರು, ರೈತರ ಬಗ್ಗೆ ಮಾತನಾಡಿಲ್ಲ. ಕಬ್ಬು ಬೆಳೆಯುವ ರೈತರಿಗೆ ಸೇರಿ ಎಲ್ಲ ರೈತರಿಗೆ ಪರಿಹಾರ ಕೊಡಬೇಕಿದೆ. ಆದರೆ, ಸರಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂದು ಆಕ್ಷೇಪಿಸಿದರು.
ಯಡಿಯೂರಪ್ಪ ಅವರು ಸುವರ್ಣ ಸೌಧ ನಿರ್ಮಿಸಿದ್ದರು. ಇಲ್ಲಿನ ಸಮಸ್ಯೆಗಳ ಪರಿಹಾರದ ನಿರೀಕ್ಷೆ ಅವರದಾಗಿತ್ತು. ಆದರೆ, ಸಿದ್ದರಾಮಯ್ಯನವರುÉ ರೈತರನ್ನು ಕಡೆಗಣಿಸಿದ್ದಾರೆ ಎಂದರು.
ರಾಜ್ಯದ ಕಾಂಗ್ರೆಸ್ಸಿಗರು ಕೇಂದ್ರ ಸರಕಾರವನ್ನು ದೂಷಿಸುತ್ತಿದ್ದಾರೆ. ರೈತರ ಸಾಲಮನ್ನಾ ಮಾಡಬೇಕು. ಹೊಸ ಸಾಲವನ್ನು ಕೊಡಬೇಕು ಎಂದು ಆಗ್ರಹಿಸಿದ ಅವರು, ಸಾಲ ವಸೂಲಿಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಹಣ, ಹೆಂಡ, ತೋಳಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಿಂದ ಇದ್ದ ಕಾಂಗ್ರೆಸ್‍ಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶ ಸಮರ್ಪಕ ಉತ್ತರ ನೀಡಿದೆ. ನರೇಂದ್ರ ಮೋದಿಯವರಂಥ ನಾಯಕ ಕಾಂಗ್ರೆಸ್‍ನಲ್ಲಿಲ್ಲ ಎಂದರು.
ರಾಜ್ಯ ಸರಕಾರವು ಕೂಡಲೇ ಬರ ಪರಿಹಾರವನ್ನು ಪ್ರಕಟಿಸದಿದ್ದರೆ ರಾಜ್ಯದ ಉದ್ದಗಲಕ್ಕೆ ತೆರಳಿ ಹೋರಾಟ ಮಾಡುವೆ. ರೈತರ ಪರವಾಗಿ ನಿಲ್ಲುವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರೂ ಉತ್ತರ ಕರ್ನಾಟಕಕ್ಕಾಗಿ ಸಿದ್ದರಾಮಯ್ಯನವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಸಿಎಂ, ಮುಲ್ಲಾಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು. ರೈತರಿಗೆ ಕೊಡಲು ಸರಕಾರದ ಬಳಿ ಹಣ ಇಲ್ಲ. ಮಕ್ಕಳ ದತ್ತು ತೆಗೆದುಕೊಂಡರೆ ಸರಕಾರಕ್ಕೆ ತೆರಿಗೆ ಕೊಡಬೇಕಿದೆ. 60 ತೆರಿಗೆಗಳನ್ನು ಏರಿಸಿದ್ದಾರೆ. ತೆರಿಗೆ, ತೆರಿಗೆಗಳ ಬಿಲ್ ಮಂಜೂರು ಮಾಡುತ್ತಿದ್ದಾರೆ ಎಂದರು.
ವಿದ್ಯುತ್, ಹಾಲು, ಮದ್ಯ ಸೇರಿ ಎಲ್ಲ ವಸ್ತುಗಳ ದರ ಏರಿಕೆಯಾಗಿದೆ. ಉಚಿತ ನೆಪದಲ್ಲಿ ಮೋಸದ ಸರಕಾರ ಇದು ಎಂದು ಆರೋಪಿಸಿದರು.