ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ ಮುಳ್ಳಿಕಾರುವಿನಲ್ಲಿ ನಡೆದಿದೆ.
ಮುಳಿಕ್ಕಾರು ಪಟ್ಟೋಡಿ ಮನೆ ನಿವಾಸಿ ಜಗದೀಶ್ ಎಂಬವರ ಪುತ್ರ ಪ್ರಣಿತ್ ಕುಮಾರ್ (1 ವರ್ಷ 9 ತಿಂಗಳು) ಮೃತಪಟ್ಟ ಮಗು.
ಜಗದೀಶ್ ಅವರ ಪತ್ನಿ ಪ್ರತಿ ದಿನ ತೋಟಕ್ಕೆ ನೀರು ಬಿಡಲು, ಬಟ್ಟೆ ತೊಳೆಯಲು ಕೆರೆಗೆ ಹೋಗುತ್ತಿದ್ದರು. ಆಗ ಮಗು ಪ್ರಣಿತ್ ಕುಮಾರ್ನನ್ನುಆಗಾಗ ಕೆರೆಯ ಬಳಿ ಕರೆದುಕೊಂಡು ಹೋಗುತ್ತಿದ್ದರು.
ಹೀಗಾಗಿ ಪ್ರಣಿತ್ಗೆ ಕೆರೆಯ ಬಳಿ ಹೋಗುವ ಅಭ್ಯಾಸವಾಗಿದ್ದು, ಮೇ 2 ರಂದು ಸಂಜೆ ಮನೆಯವರೆಲ್ಲ ಒಳಗಡೆ ಇದ್ದರು. ಪ್ರಣಿತ್ ಕುಮಾರ್ ಮನೆಯ ಹೊರಗಡೆ ಆಟವಾಡಿಕೊಂಡಿದ್ದ. ನಂತರ ಮನೆಯವರು ಹೊರಗಡೆ ಬಂದು ನೋಡಿದಾಗ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಕಾಣಿಸಲಿಲ್ಲ.
ಮನೆಯವರೆಲ್ಲರೂ ಸೇರಿ ಮನೆಯ ಸುತ್ತಮುತ್ತಲೂ ಹುಡುಕಾಟ ನಡೆಸಿ, ನಂತರ ಮಗು ಕೆರೆಯ ಬಳಿ ಹೋಗಿರಬಹುದು ಎಂದು ಅನುಮಾನಗೊಂಡು ತೋಟದಲ್ಲಿರುವ ಕೆರೆಯ ಬಳಿಗೆ ಬಂದು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಪ್ರಣಿತ್ನ ಮೃತದೇಹವು ಕೆರೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.