ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಕಾರಿಗೆ ವಿಚಾರದಲ್ಲಿ ಬಿಜೆಪಿ ಮುಖಂಡನನ್ನು ಅರೆಸ್ಟ್ ಮಾಡಿರುವ ವಿಚಾರಕ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ದ ಇದೀಗ ಎರಡು ಎಫ್ಐಆರ್ ದಾಖಲಾಗಿದ್ದು, ಈ ಹಿನ್ನಲೆ ಪೊಲೀಸರು ಪೂಂಜಾ ಅರೆಸ್ಟ್ ಗೆ ಮನೆಗೆ ಆಗಮಿಸಿದ್ದಾರೆ.
ಮೇ 18 ರಂದು ಅಕ್ರಮ ಕಲ್ಲು ಕೋರೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ವಿನಾಕಾರಣ ಬಂಧಿಸಲಾಗಿರುವುದನ್ನು ಖಂಡಿಸಿ ಶಾಸಕ ಹರೀಶ್ ಪೂಂಜ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಪ್ರತಿಭಟಿಸಿ ಪೊಲೀಸರಿಗೆ ನಿಂಧಿಸಿದ್ದರು. ಬಳಿಕ ನಡೆದ ಮೇ.20 ರಂದು ತಾಲೂಕು ಆಡಳಿತದ ಮುಂದೆ ಪ್ರತಿಭಟನೆ ನಡೆಸಿ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಎರಡನೇ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನಲೆ ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿದ್ದು, ಅವರ ಗರ್ಡಾಡಿ ನಿವಾಸದ ಮುಂದೆ ಪೊಲೀಸ್ ತಂಡ ಸಜ್ಜಾಗಿದೆ. ಯಾವುದೇ ಸಮಯದಲ್ಲೂ ಹರೀಶ್ ಪೂಂಜ ಬಂಧನದ ಸಾಧ್ಯತೆ ಎದುರಾಗಿದೆ. ಈ ಹಿನ್ನೆಲೆ ಅವರ ಮನೆಗೆ ಸಾರ್ವಜನಿಕ ಭೇಟಿಗೆ ಪೊಲೀಸರು ನಿರಾಕರಿಸಿದ್ದು, ಮನೆಗೆ ಹೋಗುವ ರಸ್ತೆಗೆ ಪೊಲೀಸ್ ಸರ್ಪಗಾವಲು ಇರಿಸಲಾಗಿದೆ. ವಿಚಾರ ತಿಳಿದು ಅವರ ಮನೆ ಮುಂದೆ ಕಾರ್ಯಕರ್ತರು ಜಮಾಯಿಸಲಾರಂಬಿಸಿದ್ದಾರೆ.