ನವದೆಹಲಿ: ಉನ್ನತ ಮಟ್ಟದ ತನಿಖೆಯ ಬಳಿಕ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ವಿಚಾರದಲ್ಲಿ ತಪ್ಪಿತಸ್ಥರೆಂದು ಕಂಡು ಬಂದ ಕಾರಣಕ್ಕೆ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ)ನಲ್ಲಿ ನೇಮಕಗೊಂಡಿದ್ದ ಭಾರತೀಯ ಸೇನಾ ಮೇಜರ್‌ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೇವೆಯಿಂದ ವಜಾ ಮಾಡಿದ್ದಾರೆ ಎಂದು ರಕ್ಷಣಾ ಮತ್ತು ಭದ್ರತಾ ಸಂಸ್ಥೆಯ ಮೂಲಗಳು ಮಂಗಳವಾರ ತಿಳಿಸಿವೆ. ಕಳೆದ ವರ್ಷ 2022ರ ಮಾರ್ಚ್‌ನಲ್ಲಿ ಮೇಜರ್ ಅವರ ಚಟುವಟಿಕೆಗಳ ಬಗ್ಗೆ ಸೇನೆಯು ತನಿಖೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಅವರು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವುದು ಮತ್ತು ಹಂಚಿಕೊಳ್ಳುವುದು ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪತ್ತೆಹಚ್ಚಿದ್ದರು. ದೇಶದ ಮೂರೂ ಸೇವೆಗಳ ಸರ್ವೋಚ್ಛ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, ಸೇನಾ ಕಾಯಿದೆ, 1950ರ ಅಡಿಯಲ್ಲಿ ಅಧಿಕಾರ ಹೊಂದಿದ್ದು, ವಾರದ ಹಿಂದೆ ಮೇಜರ್ ನನ್ನು ಸೇವೆಯಿಂದ ವಜಾಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಸುಮಾರು ಹನ್ನೆರಡು ರಕ್ಷಣಾ ಸಿಬ್ಬಂದಿಯನ್ನು ರಾಷ್ಟ್ರೀಯ ಭದ್ರತಾ ಪ್ರೋಟೋಕಾಲ್ ಉಲ್ಲಂಘನೆಯ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸೇನೆಯ ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಿಗೇಡಿಯರ್ ಸೇರಿದಂತೆ ಕನಿಷ್ಠ ಒಂದೆರಡು ಅಧಿಕಾರಿಗಳ ವಿರುದ್ಧ ಸೇನೆಯು ಮುಂದಿನ ಕೆಲವು ವಾರಗಳಲ್ಲಿ ಶಿಸ್ತು ಕ್ರಮವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.