ಲಂಡನ್ : ವಿಶ್ವದ ಗಮನ ಸೆಳೆದಿದ್ದ ಪ್ರಸಕ್ತ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ, 14 ವರ್ಷಗಳ ಕಾಲ ಬ್ರಿಟನ್‌ನಲ್ಲಿ ಆಡಳಿತ ನಡೆಸಿದ ಕನ್ಸರ್ವೇಟಿವ್ ಪಕ್ಷ ಭಾರಿ ಸೋಲು ಕಂಡಿದೆ. ಪ್ರಚಂಡ ಜಯಭೇರಿ ಬಾರಿಸಿರುವ ಲೇಬರ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಒಲಿದು ಬಂದಿದ್ದು, ಇಂದು ಅಧಿಕಾರ ಲೇಬರ್ ಪಕ್ಷಕ್ಕೆ ಹಸ್ತಾಂತರವಾಗುತ್ತಿದೆ. ಇದರ ಬೆನ್ನಲ್ಲೇ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಸಾರ್ವತ್ರಿಕ ಚುನಾವಣೆಯ ಸೋಲನ್ನು ಒಪ್ಪಿಕೊಂಡು ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕನ್ಸರ್ವೇಟಿವ್ ಪಕ್ಷವು 14 ವರ್ಷಗಳ ನಂತರ ಹೀನಾಯ ಸೋಲು ಕಂಡಿದೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಐತಿಹಾಸಿಕ ಯುಕೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದೆ. ಕನ್ಸರ್ವೇಟಿವ್ ನಾಯಕ ಮತ್ತು ಭಾರತೀಯ ಮೂಲದ ರಿಷಿ ಸುನಕ್ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಸಾರ್ವತ್ರಿಕ ಚುನಾವಣೆಯೂ ಇದಾಗಿತ್ತು. ಇಂದು ಬೆಳಗ್ಗೆ 5 ಗಂಟೆ ವೇಳೆಗೆ ಮತ ಎಣಿಕೆ ಆರಂಭವಾಗಿ, 650 ಸ್ಥಾನಗಳ ಪೈಕಿ 326 ಸ್ಥಾನಗಳನ್ನು ಲೇಬರ್ ಪಕ್ಷ ಗೆದ್ದುಕೊಂಡಿದೆ. ಸಂಸತ್ತಿನಲ್ಲಿ ಬಹುಮತ ಹೊಂದಲು ಲೇಬರ್ ಪಕ್ಷವು ಸಾಕಷ್ಟು ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರವನ್ನು ರಚಿಸಲು ಮುಂದಿನ ಹಾದಿ ಸುಲಭವಾಗಿದೆ. ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಲೇಬರ್ ಪಕ್ಷವು ಸುಮಾರು 160 ಸ್ಥಾನಗಳ ಬಹುಮತವನ್ನು ಹೊಂದಿದೆ. ದೇಶದ ಮೊದಲ ಬ್ರಿಟಿಷ್ ಭಾರತೀಯ ಮೂಲದ ಪ್ರಧಾನ ಮಂತ್ರಿ ರಿಷಿ ಸುನಕ್, ಉತ್ತರ ಇಂಗ್ಲೆಂಡ್‌ನಲ್ಲಿ 23,059 ಮತಗಳನ್ನು ಗಳಿಸಿ ತಮದೇ ಆದ ರಿಚ್‌ಮಂಡ್ ಮತ್ತು ನಾರ್ತಲರ್ಟನ್ ಸ್ಥಾನ ಗೆದ್ದುಕೊಂಡಿದ್ದಾರೆ. ಆದರೆ 14 ವರ್ಷಗಳ ಸರ್ಕಾರದ ನಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ಮರಳಿಸುವಲ್ಲಿ ರಿಷಿ ಸುನಕ್ ವಿಫಲರಾಗಿದ್ದಾರೆ.
